ADVERTISEMENT

ಸೆ.14ರಿಂದ ಅ.1ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ

ಪಿಟಿಐ
Published 25 ಆಗಸ್ಟ್ 2020, 14:39 IST
Last Updated 25 ಆಗಸ್ಟ್ 2020, 14:39 IST
ಮಾನ್ಸೂನ್ ಮಳೆಯ ನಂತರ ಸಂಸತ್ ಭವನದ ನೋಟ (ಚಿತ್ರ-ಪಿಟಿಐ)
ಮಾನ್ಸೂನ್ ಮಳೆಯ ನಂತರ ಸಂಸತ್ ಭವನದ ನೋಟ (ಚಿತ್ರ-ಪಿಟಿಐ)   

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನವನ್ನು ಸೆ.14ರಿಂದ ಅ.1ರವರೆಗೆ ನಡೆಸಬೇಕೆಂದು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಶಿಫಾರಸು ಮಾಡಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ. ಈ ಬಾರಿ ಸದನ ಒಟ್ಟು 18 ಬಾರಿ ಸಭೆ ಸೇರಲಿದೆ.ದಿನಾಂಕಗಳನ್ನು ನಂತರದ ದಿನಗಳಲ್ಲಿ ತಿಳಿಸಲಾಗುತ್ತದೆ.

ಮುಂಗಾರುಅಧಿವೇಶನಕ್ಕೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂತರ ಕಾಪಾಡಿಕೊಳ್ಳುವ ಮಾನದಂಡಗಳನ್ನು ಅನುಸರಿಸುವಾಗ ಸದಸ್ಯರಿಗೆ ಸ್ಥಳಾವಕಾಶ ಕಲ್ಪಿಸಲು ಕೋಣೆಗಳು ಮತ್ತು ಗ್ಯಾಲರಿಗಳನ್ನು ಬಳಸುವುದು ಮುಂತಾದ ಹಲವಾರು ಕ್ರಮಗಳನ್ನು ಇದೇ ಮೊದಲ ಬಾರಿಗೆ ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯಸಭಾ ಸಚಿವಾಲಯದ ಪ್ರಕಾರ, ಅಧಿವೇಶನದಲ್ಲಿ ಮೇಲ್ಮನೆಯ ಸದಸ್ಯರು ಕೋಣೆಗಳು ಮತ್ತು ಗ್ಯಾಲರಿಗಳಲ್ಲಿ ಕುಳಿತುಕೊಳ್ಳುತ್ತಾರೆ. ಭಾರತೀಯ ಸಂಸತ್ತಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, 60 ಸದಸ್ಯರು ಕೊಠಡಿಯಲ್ಲಿ ಮತ್ತು 51 ಮಂದಿ ರಾಜ್ಯಸಭೆಯ ಗ್ಯಾಲರಿಗಳಲ್ಲಿ ಮತ್ತು ಉಳಿದ 132 ಮಂದಿ ಲೋಕಸಭೆಯ ಕೊಠಡಿಯಲ್ಲಿ ಕುಳಿತಿರುತ್ತಾರೆ.

ADVERTISEMENT

ಲೋಕಸಭಾ ಸಚಿವಾಲಯವೂ ಕೂಡ ಇದೇ ರೀತಿಯ ಆಸನ ವ್ಯವಸ್ಥೆಯನ್ನು ರೂಪಿಸುತ್ತಿದೆ. ಇದೇ ಮೊದಲ ಬಾರಿಗೆ, ಗ್ಯಾಲರಿಗಳಲ್ಲಿ ಕೂರುವವರಿಗೆ ದೊಡ್ಡ ಪ್ರದರ್ಶನ ಪರದೆಗಳು ಮತ್ತು ಕನ್ಸೋಲ್‌ಗಳು, ನೇರಳಾತೀತ ಜೀವಾಣು ವಿಕಿರಣ, ಉಭಯ ಸದನಗಳ ಮಧ್ಯೆ ವಿಶೇಷ ಕೇಬಲ್‌ಗಳು ಮತ್ತು ಪಾಲಿಕಾರ್ಬೊನೇಟ್ ವಿಭಜಕಗಳು ಇರುತ್ತವೆ.

ಕಳೆದ ಜುಲೈ 17 ರಂದು ನಡೆದ ಸಭೆಯಲ್ಲಿ ರಾಜ್ಯಸಭಾ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮುಂಗಾರು ಅಧಿವೇಶನ ನಡೆಸಲು ವಿವಿಧ ಆಯ್ಕೆಗಳ ವಿವರವಾದ ಪರಿಶೀಲನೆಯ ನಂತರ ಉಭಯ ಸದನಗಳ ಕೋಣೆಗಳು ಮತ್ತು ಗ್ಯಾಲರಿಗಳನ್ನು ಬಳಸಲು ನಿರ್ಧರಿಸಿದರು.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಬಜೆಟ್ ಅಧಿವೇಶನವನ್ನು ಮೊಟಕುಗೊಳಿಸಬೇಕಾಯಿತು ಮತ್ತು ಉಭಯ ಸದನಗಳನ್ನು ಮಾರ್ಚ್ 23 ರಂದು ಮುಂದೂಡಲಾಯಿತು. ಪೂರ್ವನಿದರ್ಶನದಂತೆ, ಕಳೆದ ಅಧಿವೇಶನದಿಂದ ಆರು ತಿಂಗಳ ಅಂತ್ಯದ ಮೊದಲು ಸಂಸತ್ತಿನ ಅಧಿವೇಶನವನ್ನು ಕರೆಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.