ADVERTISEMENT

ಮಹಾರಾಷ್ಟ್ರ | ಅಜಿತ್ ಪವಾರ್, ದೇವೇಂದ್ರ ಫಡಣವೀಸ್ ರಾಜೀನಾಮೆ ಹಿಂದಿದ್ದ ಲೆಕ್ಕಾಚಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ನವೆಂಬರ್ 2019, 3:57 IST
Last Updated 27 ನವೆಂಬರ್ 2019, 3:57 IST
ದೇವೇಂದ್ರ ಫಡಣವೀಸ್ ಮತ್ತು ಅಜಿತ್ ಪವಾರ್
ದೇವೇಂದ್ರ ಫಡಣವೀಸ್ ಮತ್ತು ಅಜಿತ್ ಪವಾರ್   

ಅತ್ತ ನವದೆಹಲಿಯಲ್ಲಿ ಮಂಗಳವಾರ (ನ.26) ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ವಿಶ್ವಾಸಮತ ಯಾಚನೆಯ ದಿನಾಂಕ ಮತ್ತು ಸಮಯ ನಿಗದಿ ಸಂಬಂಧ ತೀರ್ಪು ಓದುತ್ತಿದ್ದರೆ ಇತ್ತ ಮುಂಬೈನಲ್ಲಿ ತೆರೆಮರೆಯ ರಾಜಕೀಯ ಚಟುವಟಿಕೆಗಳು ಬಿರುಸಾಗಿ ನಡೆದವು.

ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್‌ ಪವಾರ್ ರಾಜೀನಾಮೆ ಸುದ್ದಿ ಸ್ಥಳೀಯ ಟಿವಿ ಚಾನೆಲ್‌ಗಳಲ್ಲಿ ಬಿತ್ತರಗೊಳ್ಳಲು ಆರಂಭಿಸಿದರೆ 3 ಗಂಟೆಯ ಹೊತ್ತಿಗೆ ಅದು ಅಧಿಕೃತ ಎಂಬ ಮಾಹಿತಿ ಬಂತು. ಅದಕ್ಕೂ ಮುನ್ನ ಸುಮಾರು ಒಂದು ಗಂಟೆ ಕಾಲ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಅಜಿತ್‌ ಪವಾರ್‌ ನಡುವೆ ಮಾತುಕತೆ ನಡೆದಿತ್ತು.

‘ಸುಪ್ರೀಂ ಕೋರ್ಟ್‌ ನಾಳೆಯೇ (ನ.27) ವಿಶ್ವಾಸಮತ ಯಾಚನೆಗೆ ಸೂಚಿಸಿದೆ. ಇಷ್ಟು ಬೇಗ ನನ್ನ ಪಕ್ಷದ ಎಲ್ಲ ಸದಸ್ಯರ ಮನವೊಲಿಸಲು ನನ್ನಿಂದ ಆಗದು’ ಎಂದು ಪವಾರ್ ಈ ಸಂದರ್ಭ ದೇವೇಂದ್ರ ಫಡಣವೀಸ್‌ ಅವರಿಗೆ ಸ್ಪಷ್ಟಪಡಿಸಿದರು ಎಂದು ಮೂಲಗಳನ್ನು ಉಲ್ಲೇಖಿಸಿ ‘ಎನ್‌ಡಿಟಿವಿ’ ಜಾಲತಾಣ ವರದಿ ಮಾಡಿದೆ.

ADVERTISEMENT

ಅಜಿತ್ ಪವಾರ್‌ ತಮ್ಮ ನಿಲುವು ಮತ್ತು ಅಸಹಾಯಕತೆಯನ್ನು ಸ್ಪಷ್ಟಪಡಿಸಿದ ನಂತರ ಫಡಣವೀಸ್‌ ಬಿಜೆಪಿಯ ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿ ತಾವೂ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದರು.

‘ಎನ್‌ಸಿಪಿ, ಶಿವಸೇವಾ ಮತ್ತು ಕಾಂಗ್ರೆಸ್ ಮೈತ್ರಿಯ ಈ ಸರ್ಕಾರ ಹೆಚ್ಚು ದಿನ ಬಾಳುವುದಿಲ್ಲ. ಯಾವಾಗ ಬೇಕಿದ್ದರೂ ಮಧ್ಯಂತರ ಚುನಾವಣೆ ಘೋಷಣೆಯಾಗಬಹುದು. ಇಂದಿನಿಂದಲೇ ಸಿದ್ಧತೆ ಮಾಡಿಕೊಳ್ಳಿ. ಸ್ವತಂತ್ರವಾಗಿ ಸ್ಪರ್ಧಿಸಿ, ಮುಂದಿನ ಬಾರಿ ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯಬೇಕು’ ಎಂದು ಬಿಜೆಪಿಯ ಹಿರಿಯರು ಫಡಣವೀಸ್‌ಗೆ ಕಿವಿಮಾತು ಹೇಳಿದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.