ADVERTISEMENT

ಕಾಶ್ಮೀರ: ‘ಇಂಡಿಯಾ’ ಉಳಿವು ಅಳಿವಿನ ಆಟ, PDP ಜೊತೆ ಕಾನ್ಫರೆನ್ಸ್ ಮೈತ್ರಿ ಅನುಮಾನ?

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2023, 14:32 IST
Last Updated 14 ಸೆಪ್ಟೆಂಬರ್ 2023, 14:32 IST
<div class="paragraphs"><p>ಒಮರ್‌ ಅಬ್ದುಲ್ಲಾ</p></div>

ಒಮರ್‌ ಅಬ್ದುಲ್ಲಾ

   

–ಪಿಟಿಐ ಚಿತ್ರ

ಶ್ರೀನಗರ: ನವದೆಹಲಿಯಲ್ಲಿ ನಡೆದ ‘ಇಂಡಿಯಾ’ದ ಮೊದಲ ಸಮನ್ವಯ ಸಮಿತಿ ಸಭೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಮೈತ್ರಿಕೂಟದ ಜೀವಂತಿಕೆ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ADVERTISEMENT

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನ್ಯಾಷನಲ್‌ ಕಾನ್ಪರೆನ್ಸ್‌ (ಎನ್‌ಸಿ) ಹಾಗೂ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (ಪಿಡಿಪಿ) ಒಟ್ಟಾಗಿ ಅಖಾಡಕ್ಕೆ ಇಳಿಯುವ ಬಗ್ಗೆ ಅನುಮಾನಗಳು ಮೂಡಿವೆ.

ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರ ನಿವಾಸದಲ್ಲಿ ಬುಧವಾರ 14 ಸದಸ್ಯರ ಸಮನ್ವಯ ಸಮಿತಿಯ ಸಭೆ ನಡೆದಿತ್ತು. 

ಸಭೆಯ ಬಳಿಕ ಮಾತನಾಡಿದ ನ್ಯಾಷನಲ್‌ ಕಾನ್ಪರೆನ್ಸ್‌ ನಾಯಕ ಒಮರ್‌ ಅಬ್ದುಲ್ಲಾ, ‘ಇಂಡಿಯಾ’ ಸದಸ್ಯರು ಈಗಾಗಲೇ ಹೊಂದಿರುವ ಸ್ಥಾನಗಳ ಬಗ್ಗೆ ಚರ್ಚಿಸಿಲ್ಲ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಹೊಂದಿರುವ ಸ್ಥಾನಗಳಿಗೆ ಸಂಬಂಧಿಸಿದಂತೆ ಲಕ್ಷ್ಯವಹಿಸಬೇಕಿದೆ ಎಂದಿದ್ದರು.

ಇದು ಕಣಿವೆ ರಾಜ್ಯದಲ್ಲಿ ನ್ಯಾಷನಲ್‌ ಕಾನ್ಪರೆನ್ಸ್‌ ಯಾವುದೇ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಿಲ್ಲ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಮೈತ್ರಿಗೆ ಏಕೆ ಸಿದ್ಧವಿಲ್ಲ?: 2019ರ ಲೋಕಸಭಾ ಚುನಾವಣೆಯಲ್ಲಿ ನ್ಯಾಷನಲ್‌ ಕಾನ್ಪರೆನ್ಸ್‌ ಕಾಶ್ಮೀರದ ಮೂರು ಕ್ಷೇತ್ರಗಳಲ್ಲಿಯೂ ಜಯಗಳಿಸಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುವ ಎಲ್ಲಾ ಚುನಾವಣೆಗಳನ್ನು ತಾನು ಏಕಾಂಗಿಯಾಗಿ ಎದುರಿಸಬೇಕು. ಒಂದು ವೇಳೆ ಸೀಟು ಹಂಚಿಕೆ ಮಾಡಿಕೊಂಡರೆ ನಮ್ಮ ನಿರೀಕ್ಷೆಗೆ ಪೆಟ್ಟು ಬೀಳಲಿದೆ ಎಂಬುದು ಆ ಪಕ್ಷದ ನಾಯಕರ ಲೆಕ್ಕಾಚಾರವಾಗಿದೆ. ಒಮರ್‌ ಹೇಳಿಕೆಯು ಇದನ್ನು ಮತ್ತಷ್ಟು ಪುಷ್ಟೀಕರಿಸಿದೆ ಎನ್ನುತ್ತಾರೆ ವಿಶ್ಲೇಷಕರು.

ಗುಪ್ಕರ್‌ ಘೋಷಣೆಯ ಕಥೆಯೇನು: 2019ರಲ್ಲಿ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದಿತ್ತು. ಆಗ ಕಣಿವೆ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಶ್ರೀನಗರದ ಗುಪ್ಕರ್ ರಸ್ತೆಯಲ್ಲಿ ಇರುವ ನ್ಯಾಷನಲ್ ಕಾನ್ಪರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ‘ಗುಪ್ಕರ್‌’ ನಿವಾಸದಲ್ಲಿ ಸಭೆ ಸೇರಿದ್ದರು. ಕೇಂದ್ರದ ನಿರ್ಧಾರ ವಿರೋಧಿಸಿ ಈ ಸಭೆಯಲ್ಲಿ ಜಂಟಿ ನಿರ್ಣಯಕ್ಕೆ ಸಹಿ ಹಾಕಿದ್ದಾರೆ (ಪೀಪಲ್ಸ್‌ ಅಲೆಯನ್ಸ್ ಫಾರ್‌ ಗುಪ್ಕರ್‌ ಡಿಕ್ಲರೇಷನ್ (ಪಿಎಜಿಡಿ).

ಜನರ ಹಿತಾಸಕ್ತಿ ಕಾಪಾಡುವುದೇ ‘ಗುಪ್ಕರ್‌ ಘೋಷಣೆ’ಯ ಪ್ರಮುಖ ಧ್ಯೇಯವಾಗಿದೆ. ಈ ಎರಡೂ ಪಕ್ಷಗಳು ಕೂಡ ಸಹಿ ಹಾಕಿವೆ. ಆದಾಗ್ಯೂ ಎರಡು ಪಕ್ಷಗಳಲ್ಲಿ ಅಂತರ್ಗತವಾಗಿರುವ ವಿರೋಧಾಭಾಸಗಳು ಹಲವು ಭಾರಿ ಬಹಿರಂಗವಾಗಿರುವುದು ಗುಟ್ಟಾಗಿ ಉಳಿದಿಲ್ಲ.

ಗುಪ್ಕರ್‌ ಕೂಟದಲ್ಲಿರುವ ಪಕ್ಷಗಳ ಜೊತೆಗೆ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಕೇಂದ್ರಾಡಳಿತ ಪ್ರದೇಶದ ಎಲ್ಲಾ 90 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ನ್ಯಾಷನಲ್‌ ಕಾನ್ಪರೆನ್ಸ್‌ ಕಳೆದ ವರ್ಷ ಎಂದು ಘೋಷಿಸಿತ್ತು.

‘ಬಿಜೆಪಿ ವಿರುದ್ಧ ಹೋರಾಡುವ ಕಾರಣಕ್ಕಾಗಿ ಪಕ್ಷವು ‘ಇಂಡಿಯಾ’ ಮೈತ್ರಿಕೂಟದ ಜೊತೆ ಕೈಜೋಡಿಸಿದೆ. ಓಮರ್‌ ಅವರದ್ದು ವೈಯಕ್ತಿಕ ಹೇಳಿಕೆಯಾಗಿದೆ’ ಎಂದು ಪಿಡಿಪಿ ವಕ್ತಾರ ಸುಹೇಲ್ ಬುಖಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಣಿವೆ ರಾಜ್ಯದ ಜನರ ಹಕ್ಕುಗಳು ಮತ್ತು ಘನತೆಯನ್ನು ಕಾಪಾಡುವುದೇ ಗುಪ್ಕರ್‌ ಘೋಷಣೆಯ ಮೂಲ ಆಶಯವಾಗಿದೆ. ಸೈದ್ಧಾಂತಿಕ ಕಾರಣಕ್ಕಾಗಿ ನಾವು ಪಿಎಜಿಡಿ ಜೊತೆಗೆ ಇದ್ದೇವೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.