ಮುಂಬೈ: ‘ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯ ಇಚ್ಛೆಗೆ ವಿರುದ್ಧವಾಗಿ ಗರ್ಭಧಾರಣೆ ಸ್ಥಿತಿಯಲ್ಲೇ ಮುಂದುವರಿಯುವಂತೆ ಒತ್ತಾಯಿಸಲು ಸಾಧ್ಯವಿಲ್ಲ’ ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ. 28 ವಾರ ಗರ್ಭಿಣಿಯಾಗಿರುವ 12 ವರ್ಷದ ಬಾಲಕಿಯ ಕುರಿತು ತಜ್ಞವೈದ್ಯರು ಪ್ರತಿಕೂಲ ವರದಿ ನೀಡಿದ ಹೊರತಾಗಿಯೂ ನ್ಯಾಯಪೀಠ ಈ ಅಭಿಪ್ರಾಯಪಟ್ಟಿದೆ.
ಸಂತ್ರಸ್ತೆಯ ಇಚ್ಛೆಯ ವಿರುದ್ಧವಾಗಿ, ಮಗುವಿಗೆ ಜನ್ಮ ನೀಡುವಂತೆ ಬಲವಂತ ಮಾಡಿದಲ್ಲಿ ಆಕೆಯು ತನ್ನ ಭವಿಷ್ಯ ನಿರ್ಧರಿಸುವ ಹಕ್ಕನ್ನು ನ್ಯಾಯಾಲಯವು ಕಸಿದುಕೊಂಡಂತಾಗುತ್ತದೆ ಎಂದು ತಿಳಿಸಿದೆ.
ಬಾಲಕಿಯನ್ನು ಪರೀಕ್ಷೆಗೆ ಒಳಪಡಿಸಿದ್ದ ವೈದ್ಯಕೀಯ ಬೋರ್ಡ್‌ನ ತಜ್ಞ ವೈದ್ಯರು, ‘ಆಕೆಯ ವಯಸ್ಸು, ಭ್ರೂಣದ ಬೆಳವಣಿಗೆ ಆಧರಿಸಿ ಬಲವಂತವಾಗಿ ಗರ್ಭಪಾತಕ್ಕೆ ಒಳಪಡಿಸಿದರೆ, ಬಾಲಕಿಯ ಜೀವಕ್ಕೆ ತೀವ್ರ ಅಪಾಯವಿದೆ’ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಇದರ ಹೊರತಾಗಿಯೂ ಜೂನ್ 17ರಂದು ತೀರ್ಪು ಪ್ರಕಟಿಸಿದ್ದ ನ್ಯಾಯಮೂರ್ತಿ ನಿತಿನ್ ಸಂಬ್ರೆ, ಸಚಿನ್ ದೇಶ್‌ಮುಖ್ ಅವರನ್ನು ಒಳಗೊಂಡ ನ್ಯಾಯಪೀಠ, ‘ಯಾವುದೇ ತೊಡಕಾಗುವುದಿಲ್ಲ ಎಂದು ಖಚಿತಪಡಿಸಿಕೊಂಡು, ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ಬಾಲಕಿಯ ಗರ್ಭಪಾತಕ್ಕೆ ಅವಕಾಶ ನೀಡಲಾಗಿದೆ’ ಎಂದು ಆದೇಶಿಸಿತು.
ಬಾಲಕಿಯು ತನ್ನ ಚಿಕ್ಕಪ್ಪನಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಗರ್ಭಿಣಿಯಾಗಿದ್ದಳು. ಮಗಳ ಗರ್ಭಪಾತಕ್ಕೆ ಅವಕಾಶ ನೀಡುವಂತೆ ಕೋರಿ ಆಕೆಯ ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.