ADVERTISEMENT

ಬಿಪಿಎಸ್‌ಸಿ ಪರೀಕ್ಷೆಯಲ್ಲಿ ಭ್ರಷ್ಟಾಚಾರದ ಅನುಮಾನ: ಪ್ರಶಾಂತ್

ಪಿಟಿಐ
Published 30 ಡಿಸೆಂಬರ್ 2024, 14:08 IST
Last Updated 30 ಡಿಸೆಂಬರ್ 2024, 14:08 IST
<div class="paragraphs"><p>ಜನ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಅವರು ಪಟ್ನಾದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು</p></div>

ಜನ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಅವರು ಪಟ್ನಾದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು

   

–ಪಿಟಿಐ ಚಿತ್ರ

ಪಟ್ನಾ: ಬಿಹಾರ ಲೋಕಸೇವಾ ಆಯೋಗದ (ಬಿಪಿಎಸ್‌ಸಿ) ಪರೀಕ್ಷೆಯ ಮೂಲಕ ಭರ್ತಿ ಮಾಡುವ ಹುದ್ದೆಗಳಿಗಾಗಿ ‘ಸಾವಿರಾರು ಕೋಟಿ ರೂಪಾಯಿ ಕೈಬದಲಾಗಿದೆ’ ಎಂಬ ಮಾಹಿತಿ ತಮಗೆ ದೊರೆತಿದೆ ಎಂದು ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಸೋಮವಾರ ಹೇಳಿದ್ದಾರೆ. ಪರೀಕ್ಷೆಯನ್ನು ರದ್ದುಮಾಡಬೇಕು ಎಂದು ಹಲವಾರು ಅಭ್ಯರ್ಥಿಗಳು ಆಗ್ರಹಿಸುತ್ತಿದ್ದಾರೆ.

ADVERTISEMENT

ಪ್ರಶಾಂತ್ ಕಿಶೋರ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿಕಟವರ್ತಿ ಆಗಿದ್ದರು. ಸರಿಸುಮಾರು ಎರಡು ವಾರಗಳಿಂದ ನಡೆಯುತ್ತಿರುವ ಧರಣಿಯ ವಿಚಾರವಾಗಿ ನಿತೀಶ್ ಅವರು ಒಂದು ಮಾತು ಕೂಡ ಆಡದಿರುವ ಬಗ್ಗೆ ಪ್ರಶಾಂತ್ ನಿರಾಶೆ ವ್ಯಕ್ತಪಡಿಸಿದ್ದಾರೆ.

‘ಕೊರೆಯುವ ಚಳಿಯಲ್ಲಿ ಪೊಲೀಸರು ನಡೆಸಿದ ಲಾಠಿ ಚಾರ್ಜ್‌, ಜಲ ಫಿರಂಗಿ ಪ್ರಯೋಗವನ್ನು ಎದುರಿಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ದೂರದ ದೆಹಲಿಯಲ್ಲಿ ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ. ಪ್ರತಿಭಟನೆಯ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ನಿತೀಶ್ ಅವರು ಒಂದು ಮಾತೂ ಆಡಲಿಲ್ಲ’ ಎಂದು ಪ್ರಶಾಂತ್ ಸುದ್ದಿಗಾರರ ಬಳಿ ಹೇಳಿದ್ದಾರೆ.

‘ನಾನು ಕೆಲವು ಸಮಯದಿಂದ ಕೇಳುತ್ತಿರುವುದನ್ನು ಈಗ ಹಂಚಿಕೊಳ್ಳುತ್ತಿದ್ದೇನೆ. ಕೋಟ್ಯಂತರ ರೂಪಾಯಿ ಈಗಾಗಲೇ ಕೈಬದಲಾಗಿರುವ ಕಾರಣಕ್ಕಾಗಿ ಹೊಸದಾಗಿ ಪರೀಕ್ಷೆ ನಡೆಸಲು ಬಿಪಿಎಸ್‌ಸಿ ಹಿಂದೇಟು ಹಾಕುತ್ತಿದೆ ಎಂದು ಅಭ್ಯರ್ಥಿಗಳು ಭಾವಿಸಿದ್ದಾರೆ. ಡಿಸೆಂಬರ್‌ 13ರಂದು ನಡೆದಿರುವ ಪರೀಕ್ಷೆಯ ಮೂಲಕ ಭರ್ತಿ ಮಾಡಬೇಕಿರುವ ಹುದ್ದೆಗಳನ್ನು ಮಾರಾಟಕ್ಕೆ ಇರಿಸಲಾಗಿದೆ’ ಎಂದು ಪ್ರಶಾಂತ್ ದೂರಿದ್ದಾರೆ. ಪರೀಕ್ಷೆಗೆ ಅಂದಾಜು ಐದು ಲಕ್ಷ ಮಂದಿ ಹಾಜರಾಗಿದ್ದರು.

ಪ್ರಶ್ನೆಪತ್ರಿಕೆಗಳು ಸೋರಿಕೆ ಆಗಿವೆ ಎಂದು ಆರೋಪಿಸಿ ಪಟ್ನಾದಲ್ಲಿನ ಒಂದು ಪರೀಕ್ಷಾ ಕೇಂದ್ರದಲ್ಲಿ ನೂರಾರು ಅಭ್ಯರ್ಥಿಗಳು ಪರೀಕ್ಷೆಯನ್ನು ಬಹಿಷ್ಕರಿಸಿದ್ದರು.

ಆದರೆ, ಈ ಆರೋಪವನ್ನು ಬಿಪಿಎಸ್‌ಸಿ ಅಲ್ಲಗಳೆದಿದೆ. ಪರೀಕ್ಷೆ ರದ್ದುಮಾಡಲು ಪಿತೂರಿ ನಡೆದಿದೆ ಎಂದು ಅದು ದೂರಿದೆ. ಹಾಗಿದ್ದೂ ವಿವಾದದ ಕೇಂದ್ರಬಿಂದುವಿನಂತೆ ಇರುವ ‘ಬಾಪು ಪರೀಕ್ಷಾ ಪರಿಸರ್‌’ ಕೇಂದ್ರದಲ್ಲಿ ಪರೀಕ್ಷೆ ನಿಗದಿಯಾಗಿದ್ದ 10 ಸಾವಿರಕ್ಕೂ ಹೆಚ್ಚಿನ ಅಭ್ಯರ್ಥಿಗಳಿಗೆ ಮರುಪರೀಕ್ಷೆಗೆ ಆದೇಶಿಸಲಾಗಿದೆ.

ಸಣ್ಣ ಸಂಖ್ಯೆಯ ಅಭ್ಯರ್ಥಿಗಳಿಗೆ ಮಾತ್ರ ಮರುಪರೀಕ್ಷೆ ನಡೆಸುವುದು ಸಮಾನ ಅವಕಾಶಗಳ ತತ್ತ್ವಕ್ಕೆ ವಿರುದ್ಧ. ಹೀಗಾಗಿ ಇಡೀ ಪರೀಕ್ಷೆಯನ್ನು ರದ್ದುಪಡಿಸಿ, ಹೊಸದಾಗಿ ಪರೀಕ್ಷೆ ನಡೆಸಬೇಕು ಎಂಬುದು ಪ್ರತಿಭಟನೆಯಲ್ಲಿ ತೊಡಗಿರುವ ಅಭ್ಯರ್ಥಿಗಳ ಆಗ್ರಹ.

ಪೊಲೀಸರು ಭಾನುವಾರ ಲಾಠಿ ಚಾರ್ಜ್‌ ನಡೆಸುವ ಮುನ್ನ ಪ್ರತಿಭಟನಕಾರರನ್ನು ಬಿಟ್ಟುಹೋದ ಪ್ರಶಾಂತ್ ಅವರ ನಡೆಯು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಕೊರೆಯುವ ಚಳಿಯಲ್ಲಿ ಯುವಕರ ಮೇಲೆ ಜಲ ಫಿರಂಗಿ ಪ್ರಯೋಗಿಸುವುದು, ಲಾಠಿ ಚಾರ್ಜ್‌ ಮಾಡುವುದು ಅಮಾನವೀಯ. ಬಿಜೆಪಿಯ ಡಬಲ್ ಎಂಜಿನ್ ಎಂಬುದು ಯುವಕರ ಮೇಲೆ ದುಪ್ಪಟ್ಟು ದೌರ್ಜನ್ಯ ನಡೆಸುವುದರ ಸಂಕೇತವಾಗಿ ಬದಲಾಗಿದೆ.
ಪ್ರಿಯಾಂಕಾ ಗಾಂಧಿ ವಾದ್ರಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ
ಮೋಸದ ಕೃತ್ಯ ನಡೆದಿರುವುದು ಪತ್ತೆಯಾದಾಗ ಬಿಜೆಪಿಯು ನಾಚಿಕೆಬಿಟ್ಟು ಅದನ್ನು ಅಲ್ಲಗಳೆಯುತ್ತದೆ ಅಥವಾ ಲಾಠಿ ಚಾರ್ಜ್ ನಡೆಸಿ ಯುವಕರ ಬಾಯಿ ಮುಚ್ಚಿಸಲು ಯತ್ನಿಸುತ್ತದೆ.
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಪ್ರಶಾಂತ್ ವಿರುದ್ಧ ತೇಜಸ್ವಿ ಟೀಕೆ

ಪಟ್ನಾ: ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷವು ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ‘ಬಿ’ ತಂಡದ ರೀತಿ ಕೆಲಸ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಟೀಕಿಸಿದ್ದಾರೆ. ಪ್ರತಿಭಟನೆಯಲ್ಲಿ ತೊಡಗಿದ್ದ ಅಭ್ಯರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್‌ ನಡೆಸಿದ ನಂತರ ತೇಜಸ್ವಿ ಅವರು ವಿಡಿಯೊ ಸಂದೇಶ ರವಾನಿಸಿದ್ದಾರೆ.

‘ಈ ಪ್ರತಿಭಟನೆಯನ್ನು ವಿದ್ಯಾರ್ಥಿಗಳು ಆರಂಭಿಸಿದ್ದರು. ಅವರ ಪ್ರತಿಭಟನೆಯು ಸರ್ಕಾರ ಕಂಪಿಸುವಂತೆ ಮಾಡಿತ್ತು. ಈ ಸಂದರ್ಭದಲ್ಲಿ ಸರ್ಕಾರದ ‘ಬಿ’ ತಂಡದಂತೆ ಕೆಲಸ ಮಾಡುವ ಕೆಲವರು ಬಂದರು. ಪ್ರತಿಭಟನಕಾರರು ಗಾಂಧಿ ಮೈದಾನದ ಕಡೆ ಸಾಗುವಂತೆ ತಪ್ಪು ಮಾರ್ಗದರ್ಶನ ನೀಡಲಾಯಿತು... ಲಾಠಿ ಚಾರ್ಜ್‌ ಮತ್ತು ಜಲ ಫಿರಂಗಿಯನ್ನು ಎದುರಿಸುವ ಹೊತ್ತು ಬಂದಾಗ ಪ್ರತಿಭಟನೆಯನ್ನು ಮುನ್ನಡೆಸುವುದಾಗಿ ಹೇಳಿದ್ದವರು ಓಡಿಹೋಗಿದ್ದರು’ ಎಂದು ತೇಜಸ್ವಿ ಅವರು ಹೇಳಿದ್ದಾರೆ. ಪೊಲೀಸರು ಲಾಠಿ ಚಾರ್ಜ್‌ ನಡೆಸಿದಾಗ ಪ್ರಶಾಂತ್ ಅವರು ಅಲ್ಲಿರಲಿಲ್ಲ. ಆದರೆ ಭಾನುವಾರ ಅವರು ತಮ್ಮ ಬೆಂಬಲಿಗರೊಂದಿಗೆ ಅಭ್ಯರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.