ADVERTISEMENT

ಕೋವಿಡ್‌–19 ಲಸಿಕೆ ಅಭಿಯಾನ: ಸಜ್ಜಾಗಿರಲು ಸಿಎಪಿಎಫ್‌ಗೆ ಸೂಚನೆ

ಪಿಟಿಐ
Published 29 ಡಿಸೆಂಬರ್ 2020, 11:11 IST
Last Updated 29 ಡಿಸೆಂಬರ್ 2020, 11:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಡ್–19 ಚಿಕಿತ್ಸೆಗೆ ಲಸಿಕೆ ನೀಡುವ ಅಭಿಯಾನದ ವೇಳೆ ವೈದ್ಯಕೀಯ ತ್ಯಾಜ್ಯದ ಸುರಕ್ಷಿತ ವಿಲೇವಾರಿಗೆ ಸಹಕಾರ ನೀಡಲು ಸಜ್ಜಾಗಿರುವಂತೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗೆ (ಸಿಎಪಿಎಫ್‌) ಸೂಚಿಸಲಾಗಿದೆ.

ಲಸಿಕೆ ನೀಡುವ ಅಭಿಯಾನ ಶೀಘ್ರವೇ ಆರಂಭವಾಗಲಿದೆ. ಗಡಿ ರಕ್ಷಣೆ ಜೊತೆಗೆ ಸಿಎಪಿಎಫ್‌ ಆಂತರಿಕವಾಗಿ ವಿವಿಧ ರಕ್ಷಣಾ ಕಾರ್ಯಗಳಲ್ಲಿಯೂ ಸೇವೆ ಒದಗಿಸುತ್ತಿದೆ. ಈಗ ಅಭಿಯಾನದ ವೇಳೆಯಲ್ಲೂ ನಿರ್ಣಾಯಕ ಪಾತ್ರ ವಹಿಸಲಿದೆ.

ಇತ್ತೀಚಿಗೆ ನಡೆದ ಪೊಲೀಸ್‌ ಮುಖ್ಯಸ್ಥರ ಸಭೆಯಲ್ಲಿ ಈ ವಿಷಯ ಚರ್ಚೆಯಾಗಿದೆ. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರೂ ಭಾಗವಹಿಸಿದ್ದರು.

ADVERTISEMENT

ಕೊರೊನಾ ಲಸಿಕೆ ನೀಡುವ ಅಭಿಯಾನದ ವೇಳೆ ವೈದ್ಯಕೀಯ ತ್ಯಾಜ್ಯದ ಸುರಕ್ಷಿತ ವಿಲೇವಾರಿಗೆ ಮಾನವ ಸಂಪನ್ಮೂಲ ಅಗತ್ಯವಿದ್ದಲ್ಲಿ ಪೂರಕವಾಗಿ ಸಿಬ್ಬಂದಿ ಸಜ್ಜುಗೊಳಿಸಲು ಕೇಂದ್ರ ಪೊಲೀಸ್‌ ಹಾಗೂ ಸಿಎಪಿಎಫ್‌ಗೆ ಸಭೆಯಲ್ಲಿ ಸೂಚಿಸಲಾಗಿದೆ.

ವೈದ್ಯಕೀಯ ಸಿಬ್ಬಂದಿ ಹಾಗೂ ವ್ಯವಸ್ಥಿತವಾಗಿ ಅಭಿಯಾನ ನಡೆಸುವುದು ಸೇರಿದಂತೆ ವೈದ್ಯಕೀಯ ಸೇವೆಗೆ ನೆರವಾಗಬಹುದಾದ ಇತರೆ ಸಿಬ್ಬಂದಿಯನ್ನು ಗುರುತಿಸಲೂ ಸೂಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಅಭಿಯಾನದ ವೇಳೆ ಸೃಷ್ಟಿಯಾಗುವ ಸಿರಿಂಜ್‌, ಹತ್ತಿ, ರ‍್ಯಾಪರ್‌ಗಳು, ಕೈಗವುಸುಗಳು, ಸ್ಯಾನಿಟೈಸರ್ ಬಾಟೆಲ್‌ಗಳು ಹಾಗೂ ಇತರೆ ವೈದ್ಯಕೀಯ ಪರಿಕರಗಳ ವಿಲೇವಾರಿ ನಿಟ್ಟಿನಲ್ಲಿ ಈ ಸೂಚನೆ ನೀಡಲಾಗಿದೆ. ಕೋವಿಡ್‌ ಸಂದರ್ಭದ ವೇಳೆ ವೈದ್ಯಕೀಯ ಸಿಬ್ಬಂದಿ ಕಾರ್ಯಹೊರೆ ಹೆಚ್ಚಾಗಿದೆ. ಹೀಗಾಗಿ, ಅಭಿಯಾನದ ವೇಳೆ ಸಿಎಪಿಎಫ್‌ ಪೂರಕ ಸೇವೆ ನೀಡಬಹುದು.

ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮಹಾನಿರ್ದೇಶಕ ಎಸ್‌.ಎಸ್. ದೇಸ್ವಾಲ್‌ ಅವರು ಕಳೆದ ತಿಂಗಳು ನೀಡಿದ್ದ ಸಂದರ್ಶನವೊಂದರಲ್ಲಿ ಕೊರೊನಾ ನಿರೋಧಕ ಲಸಿಕೆ ನೀಡುವ ಅಭಿಯಾನದ ಸಂದರ್ಭದಲ್ಲಿ ಸಿಎಪಿಎಫ್‌ ಪ್ರಮುಖ ಹೊಣೆಗಾರಿಕೆ ನಿಭಾಯಿಸಬಹುದು ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.