ಮೀರಠ್: ‘ದೇಶದಲ್ಲಿ ಬಂಡವಾಳಶಾಹಿ ವಾದವು ತೀವ್ರವಾಗಿ ನೆಲೆಗೊಳ್ಳುತ್ತಿದೆ. ಸಣ್ಣ ರೈತರ ಜಮೀನುಗಳನ್ನು ಉದ್ಯಮಪತಿಗಳ ಕೈಗೆ ಇಡಲಾಗುತ್ತಿದೆ’ ಎಂದು ಭಾರತೀಯ ಕಿಸಾನ್ ಸಂಘಟನೆಯ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಬುಧವಾರ ಅಭಿಪ್ರಾಯಪಟ್ಟರು.
‘ಸರ್ಕಾರಿ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ರೈತರ ಜಮೀನುಗಳನ್ನು ಹೀಗೆಯೇ ಬಂಡವಾಳಶಾಹಿಗಳಿಗೆ ನೀಡುತ್ತಿದ್ದರೆ, ಸಂಘಟನೆಯು ಚಳವಳಿ ಆರಂಭಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ತಮ್ಮ ಜಮೀನನ್ನು ಸರ್ವೇ ಮಾಡುತ್ತಿದ್ದುದನ್ನು ವಿರೋಧಿಸಿ ಮನೋಹರ್ ಕುಶ್ವಾ ಎಂಬ ರೈತ ಸೋಮವಾರ ವಿದ್ಯುತ್ ಟವರ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಕುಟುಂಬವನ್ನು ರಾಕೇಶ್ ಟಿಕಾಯತ್ ಅವರು ಬುಧವಾರ ಭೇಟಿ ಮಾಡಿದರು. ಈ ವೇಳೆ ಟಿಕಾಯತ್ ಮಾತನಾಡಿದರು.
‘ಜಮೀನು ಸರ್ವೇ ಮಾಡಲು ಹೈಕೋರ್ಟ್ ತಡೆ ನೀಡಿದ್ದರೂ ಸರ್ವೇ ಮಾಡಲಾಗುತ್ತಿತ್ತು. ಈ ಕಾರಣದಿಂದಲೇ ಮನೋಹರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.