ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರ ಐಷಾರಾಮಿ ನಿವಾಸದ ಬಳಿ ಇತ್ತೀಚೆಗೆ ಪತ್ತೆಯಾಗಿದ್ದ ಎಸ್‌ಯುವಿ ಮತ್ತು ಅದರಲ್ಲಿದ್ದ ಜಿಲೆಟಿನ್ ಕಡ್ಡಿಗಳನ್ನು ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಕಳುಹಿಸಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.
ಮುಂಬೈನ ಕಲಿನಾದಲ್ಲಿ ಇರುವ ಫೊರೆನ್ಸಿಕ್ ಸೈನ್ಸ್ ಲ್ಯಾಬ್‌ಗೆ (ಎಫ್‌ಎಸ್‌ಎಲ್) ಇವುಗಳನ್ನು ಕಳುಹಿಸಲಾಗಿದೆ. ಕಾರಿನಲ್ಲಿ ಯಾವುದಾದರೂ ರಕ್ತದ ಕಲೆ, ಕೂದಲು ಅಥವಾ ಕುರುಹು ಪತ್ತೆಯಾದರೆ, ಈ ಕಾರನ್ನು ಚಲಾಯಿಸಿಕೊಂಡು ಬಂದ ವ್ಯಕ್ತಿಯನ್ನು ಗುರುತಿಸಲು ಸಹಾಯವಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಯೋಗಾಲಯವು ಈ ಕುರಿತು ವಾರದೊಳಗೆ ವರದಿ ನೀಡಲಿದೆ ಎಂದರು. ಈ ಕಡ್ಡಿಗಳಲ್ಲಿನ ಜಿಲೆಟಿನ್‌ನ ಶೇಕಡಾವಾರು ಪ್ರಮಾಣವನ್ನು ಎಫ್‌ಎಸ್‌ಎಲ್ ಪತ್ತೆ ಮಾಡಲಿದೆ. ಅಲ್ಲದೆ ವಾಹನದ ಚಾಸಿ ಸಂಖ್ಯೆ ಬದಲಾಗಿದೆಯೇ ಎಂಬುದನ್ನು ಗುರುತಿಸಲಿದೆ. ಇದಾದರೆ ವಾಹನದ ನಿಜವಾದ ಮಾಲೀಕ ಯಾರು ಎಂಬುದು ಗೊತ್ತಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಅಂಬಾನಿ ಅವರ ಮನೆಯ ಬಳಿ ಪತ್ತೆಯಾಗಿದ್ದ ಸ್ಕಾರ್ಪಿಯೊ ವಾಹನ ತನ್ನದೆಂದು ಹೇಳಿಕೊಂಡಿದ್ದ ಆಟೊಮೊಬೈಲ್ ಪರಿಕರಗಳ ವ್ಯಾಪಾರಿ ಹಿರೇನ್ ಮನ್‌ಸುಖ್ (45) ಅವರು ಕೆಲ ದಿನಗಳ ಹಿಂದೆಯಷ್ಟೇ ಶಂಕಾಸ್ಪದವಾಗಿ ಮೃತಪ್ಟಿದ್ದರು. ಅವರು ಈ ವಾಹನ ಫೆ.18ರಂದು ಐರೋಲಿ–ಮುಲುಂದ್ ಸೇತುವೆ ಬಳಿಯಿಂದ ಕಳುವಾಗಿತ್ತು ಎಂದು ಪೊಲೀಸರಿಗೆ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.