ADVERTISEMENT

ಉತ್ತರಾಖಂಡ | ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಮುಳುಗಿದ ಕಾರು; 9 ಪ್ರವಾಸಿಗರ ಸಾವು

ಪಿಟಿಐ
Published 8 ಜುಲೈ 2022, 14:18 IST
Last Updated 8 ಜುಲೈ 2022, 14:18 IST
   

ನೈನಿತಾಲ್ (ಉತ್ತರಾಖಂಡ): ಉಕ್ಕಿ ಹರಿಯುತ್ತಿದ್ದ ಧೆಲಾ ನದಿಯ ಮೇಲ್ಸೇತುವೆ ಮೇಲೆ ಚಲಿಸುತ್ತಿದ್ದ ಕಾರೊಂದು ನೀರು ಪಾಲಾಗಿದ್ದು, 9 ಮಂದಿ ಮೃತಪಟ್ಟಿರುವ ದುರಂತ ಜಿಲ್ಲೆಯ ರಾಮನಗರದಲ್ಲಿ ಸಂಭವಿಸಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಕಾರು ಪಂಜಾಬ್‌ಗೆ ವಾಪಸ್ಸಾಗುತ್ತಿದ್ದಾಗ ಮುಂಜಾನೆ 5.45ರ ಸುಮಾರಿಗೆ ದುರ್ಘಟನೆ ನಡೆದಿದೆ ಎಂದು ಎಸ್‌ಎಸ್‌ಪಿ ಪಂಕಜ್‌ ಭಟ್‌ ಮಾಹಿತಿ ನೀಡಿದ್ದಾರೆ.

ಮೃತದೇಹಗಳನ್ನು ಹೊರತೆಗೆಯಲಾಗಿದೆ.ರಾಮನಗರದ ಕಾರ್ಬೆಟ್‌ ಕಾಲೊನಿಯ 22 ವರ್ಷ ನಜಿಯಾ ಎಂಬಾತನನ್ನು ರಕ್ಷಿಸಲಾಗಿದೆ. ಅವರನ್ನುರಾಮನಗರದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದುಭಟ್‌ ಹೇಳಿದ್ದಾರೆ.

ADVERTISEMENT

ಕಾರು ಪಂಜಾಬ್‌ ನೋಂದಣಿ ಸಂಖ್ಯೆಯನ್ನು ಹೊಂದಿದೆ. ಕಾರಿನಲ್ಲಿ ಆ ರಾಜ್ಯದ ಪ್ರವಾಸಿಗರಷ್ಟೇ ಇದ್ದಿರಬಹುದು ಎಂದು ತನಿಖಾಧಿಕಾರಿಗಳು ಆರಂಭದಲ್ಲಿ ಅಂದಾಜಿಸಿದ್ದರು. ಮೃತಪಟ್ಟವರಲ್ಲಿ ಆರು ಮಂದಿ ಮಹಿಳೆಯರು ಹಾಗೂ ಮೂವರು ಪುರುಷರು ಎಂದು ಅವರು ತಿಳಿಸಿದ್ದಾರೆ.

ಮೃತರನ್ನು ರಾಮನಗರದಕಾರ್ಬೆಟ್‌ ಕಾಲೊನಿಯ ಆಶಿಯಾ, ಪಟಿಯಾಲಾದ ಕವಿತಾ, ಜಾನ್ಹವಿ, ಪವನ್‌ ಮತ್ತು ಇಕ್ಬಾಲ್‌, ದೆಹಲಿಯ ಹೀನಾ ಮತ್ತು ಸಂಗೀತಾ ತಮಂಗ್‌, ನೋಯಿಡಾದ ಪಿಂಕಿ, ಪಂಜಾಬ್‌ನ ಅಮನ್‌ದೀಪ್‌ ಸಿಂಗ್‌ ಎಂದು ಗುರುತಿಸಲಾಗಿದೆ.

ಕಾರು ನದಿಯಲ್ಲಿ ಮುಳುಗಿದ ಸ್ಥಳದಲ್ಲಿನ ಮೇಲ್ಸೇತುವೆ ತಗ್ಗು ಪ್ರದೇಶದಲ್ಲಿದೆ.ಸ್ಥಳದಲ್ಲಿದ್ದ ಜನರು ನೀಡಿದ ಎಚ್ಚರಿಕೆಯನ್ನು ಲೆಕ್ಕಿಸದೆ, ಮೇಲ್ಸೇತುವೆ ಮೂಲಕ ನದಿ ದಾಟಲು ಚಾಲಕ ತುಂಬಾ ವೇಗವಾಗಿ ಕಾರು ಚಾಲನೆ ಮಾಡಿದರು ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ಹೇಳಿದ್ದಾರೆ.

ರಾಮನಗರದಲ್ಲಿನ ಹೋಮ್‌ ಸ್ಟೇ ಹಾಗೂ ರೆಸ್ಟೋರೆಂಟ್‌ನಲ್ಲಿ ಉಳಿದುಕೊಂಡಿದ್ದಪ್ರವಾಸಿಗರೆಲ್ಲ, ಬೆಳಗ್ಗೆ 5ಕ್ಕೆ ಪ್ರಯಾಣ ಆರಂಭಿಸಿದ್ದರು. ಕಾರು ನದಿಗೆ ಜಾರುತ್ತಿದ್ದಂತೆಯೇ ತಲೆಕೆಳಗಾಗಿದೆ. ಶವಗಳನ್ನು ಮೇಲೆತ್ತಲು ರಕ್ಷಣಾ ತಂಡ ಗಂಟೆಗಳ ಕಾಲ ಹರಸಾಹಸ ನಡೆಸಬೇಕಾಯಿತು ಎಂದು ಭಟ್‌ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.