ADVERTISEMENT

ಜನಗಣತಿಯೊಂದಿಗೆ ಜಾತಿ ಗಣತಿ: ಕೇಂದ್ರ ಸರ್ಕಾರ ತೀರ್ಮಾನ

ರಾಜಕೀಯ ಲಾಭ ಪಡೆಯಲು ಬಿಜೆಪಿ–ಕಾಂಗ್ರೆಸ್‌ ನಡುವೆ ‘ಸಮರ’

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಏಪ್ರಿಲ್ 2025, 15:53 IST
Last Updated 30 ಏಪ್ರಿಲ್ 2025, 15:53 IST
   

ನವದೆಹಲಿ: ಬಹುದೊಡ್ಡ ರಾಜಕೀಯ ಪರಿಣಾಮ ಉಂಟು ಮಾಡುವ ತೀರ್ಮಾನ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮುಂದಿನ ದಶಕದ ಜನಗಣತಿಯೊಂದಿಗೆ ಜಾತಿ ಗಣತಿ ನಡೆಸಲು ತೀರ್ಮಾನಿಸಿದೆ.

ಸ್ವಾತಂತ್ರ್ಯದ ನಂತರ, ದೇಶದಾದ್ಯಂತ ಜಾತಿ ಗಣತಿ ನಡೆಯುತ್ತಿರುವುದು ಇದೇ ಮೊದಲು. 1931ರ ಜನಗಣತಿಯ ನಂತರ ಜಾತಿ ಗಣತಿಯನ್ನು ಕೈಬಿಡಲಾಗಿತ್ತು. ಜಾತಿ ಗಣತಿಯ ರಾಜಕೀಯ ಲಾಭ ಪಡೆಯಲು ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಬುಧವಾರವೇ ‘ಸಮರ’ ಆರಂಭವಾಗಿದೆ. 

ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು. ಆದರೆ, ಈಗಾಗಲೇ ವಿಳಂಬವಾಗಿರುವ ಜನಗಣತಿಯ ವೇಳಾಪಟ್ಟಿಯನ್ನು ಸರ್ಕಾರ ಪ್ರಕಟಿಸಿಲ್ಲ. ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಿಂದ 26 ಮಂದಿ ಮೃತಪಟ್ಟ ಒಂದು ವಾರದ ಬಳಿಕ ಹಾಗೂ ಬಿಹಾರದ ಚುನಾವಣೆಗೆ ಕೆಲವೇ ತಿಂಗಳುಗಳು ಉಳಿದಿರುವಾಗ ಕೇಂದ್ರ ಸರ್ಕಾರ ಜಾತಿ ಗಣತಿಯ ದಾಳ ಉರುಳಿಸಿದೆ.

ADVERTISEMENT

ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ದಲಿತರು ಹಾಗೂ ಒಬಿಸಿಗಳು ಬಿಜೆಪಿಯಿಂದ ದೂರ ಸರಿದಿದ್ದರು. ಇದರಿಂದಾಗಿ, ರಾಜ್ಯದಲ್ಲಿ ಬಿಜೆಪಿ ಹೀನಾಯ ಸಾಧನೆ ಮಾಡಿತ್ತು. 2027ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸರ್ಕಾರ ಈ ಅಚ್ಚರಿಯ ತೀರ್ಮಾನ ತೆಗೆದುಕೊಂಡಂತಿದೆ. 

ಆದಾಗ್ಯೂ, ಸರ್ಕಾರವು ಜಾತಿ ಎಣಿಕೆಯನ್ನು ಯಾವಾಗ ಪೂರ್ಣಗೊಳಿಸಲು ಉದ್ದೇಶಿಸಿದೆ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. 2021ರಲ್ಲಿ ನಡೆಯಬೇಕಿದ್ದ ಜನಗಣತಿಯ ವೇಳಾಪಟ್ಟಿಯನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ. ಜಾತಿ ಎಣಿಕೆಯನ್ನು ಸೇರಿಸುವುದರಿಂದ ಈ ಕಾರ್ಯವು ಮತ್ತಷ್ಟು ವಿಳಂಬವಾಗುವ ಸಾಧ್ಯತೆಯೂ ಇದೆ. 

ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಯಬೇಕು ಎಂದು ವಿರೋಧ ಪಕ್ಷ ನಾಯಕ ರಾಹುಲ್‌ ಗಾಂಧಿ ಕಳೆದ ಮೂರು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ‘ಜಾತಿ ಗಣತಿಯಿಂದ ಸಮಾಜದ ವಿವಿಧ ಜಾತಿಗಳ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಇದರಿಂದ ಹಿಂದುಳಿದ ವರ್ಗಗಳಿಗೆ, ದಲಿತರಿಗೆ ಮತ್ತು ಆದಿವಾಸಿಗಳಿಗೆ ಉದ್ದೇಶಿತ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ' ಎಂಬುದು ಅವರ ಪ್ರತಿಪಾದನೆ. ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಇದಕ್ಕೆ ಧ್ವನಿಗೂಡಿಸಿವೆ. 2024ರ ಲೋಕಸಭಾ ಚುನಾವಣೆ ಹಾಗೂ ಈಚಿನ ವಿಧಾನಸಭಾ ಚುನಾವಣೆಗಳಲ್ಲಿ ಜಾತಿಗಣತಿಯು ಪ್ರಮುಖ ಚುನಾವಣಾ ವಿಷಯವಾಗಿತ್ತು. ಕರ್ನಾಟಕ, ಬಿಹಾರ ಹಾಗೂ ತೆಲಂಗಾಣದಂತಹ ಕೆಲವು ರಾಜ್ಯಗಳು ಈಗಾಗಲೇ ಅಂತಹ ಸಮೀಕ್ಷೆಗಳನ್ನು ನಡೆಸಿವೆ. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಜಾತಿ ಗಣತಿ ವರದಿ ಮಂಡನೆಗೆ ರಾಹುಲ್‌ ಅವರ ಒತ್ತಡ ಪ್ರಮುಖ ಕಾರಣ. 

ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ತೆಗೆದುಕೊಂಡ ನಿರ್ಧಾರವನ್ನು ಘೋಷಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ‘ಜನಗಣತಿಯು ಕೇಂದ್ರದ ವ್ಯಾಪ್ತಿಗೆ ಬರುತ್ತದೆ. ಆದರೆ, ಕೆಲವು ರಾಜ್ಯಗಳು ಪಾರದರ್ಶಕವಲ್ಲದ ಸಮೀಕ್ಷೆಗಳ ಹೆಸರಿನಲ್ಲಿ ಜಾತಿ ಗಣತಿ ನಡೆಸಿವೆ. ಇದು ಸಮಾಜದಲ್ಲಿ ಸಾಕಷ್ಟು ಅನುಮಾನಗಳನ್ನು ಸೃಷ್ಟಿಸಿದೆ’ ಎಂದು ಆರೋಪಿಸಿದರು.

‘ಸ್ವಾತಂತ್ರ್ಯದ ನಂತರ ನಡೆದ ಎಲ್ಲ ಜನಗಣತಿಗಳಲ್ಲಿ ಜಾತಿಯನ್ನು ಸೇರಿಸಿರಲಿಲ್ಲ. ಕಾಂಗ್ರೆಸ್ ಸರ್ಕಾರಗಳು ಯಾವಾಗಲೂ ಜಾತಿ ಗಣತಿ ವಿರೋಧಿಸಿವೆ. ಕಾಂಗ್ರೆಸ್‌ ಪಕ್ಷವು ಈ ವಿಷಯವನ್ನು ರಾಜಕೀಯ ಸಾಧನವಾಗಿ ಬಳಸಿಕೊಂಡಿದೆ’ ಎಂದು ಅವರು ವಾಗ್ದಾಳಿ ನಡೆಸಿದರು. ವಿರೋಧ ಪಕ್ಷಗಳ ಸರ್ಕಾರ ಇರುವ ರಾಜ್ಯಗಳಲ್ಲಿ ರಾಜಕೀಯ ಕಾರಣಕ್ಕಾಗಿ ಜಾತಿ ಸಮೀಕ್ಷೆ ನಡೆಸಲಾಗಿದೆ’ ಎಂದರು. 

‘ಈ ಎಲ್ಲ ಸಂಗತಿಗಳನ್ನು ಪರಿಗಣಿಸಿ ಮತ್ತು ರಾಜಕೀಯದಿಂದ ಸಾಮಾಜಿಕ ರಚನೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು, ಸಮೀಕ್ಷೆಗಳ ಬದಲಿಗೆ ಜಾತಿ ಎಣಿಕೆಯನ್ನು ಜನಗಣತಿಯಲ್ಲಿ ಪಾರದರ್ಶಕವಾಗಿ ಸೇರಿಸಲು ನಿರ್ಧರಿಸಲಾಗಿದೆ. ಇದು ನಮ್ಮ ಸಮಾಜದ ಸಾಮಾಜಿಕ ಮತ್ತು ಆರ್ಥಿಕ ರಚನೆಯನ್ನು ಬಲಪಡಿಸುತ್ತದೆ’ ಎಂದು ಸಚಿವರು ಹೇಳಿದರು.

‘ಕೆಲವು ರಾಜ್ಯಗಳು ಜಾತಿ ಸಮೀಕ್ಷೆಯನ್ನು ಉತ್ತಮವಾಗಿ ಮಾಡಿವೆ. ಆದರೆ, ಇನ್ನೂ ಕೆಲವು ರಾಜ್ಯಗಳು ಅಂತಹ ಸಮೀಕ್ಷೆಗಳನ್ನು ಸಂಪೂರ್ಣವಾಗಿ ರಾಜಕೀಯ ದೃಷ್ಟಿಕೋನದಿಂದ ಪಾರದರ್ಶಕವಲ್ಲದ ರೀತಿಯಲ್ಲಿ ನಡೆಸಿವೆ’ ಎಂದರು. 

‘2010 ರಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಜಾತಿ ಜನಗಣತಿಯ ವಿಷಯವನ್ನು ಸಂಪುಟದಲ್ಲಿ ಚರ್ಚಿಸುವುದಾಗಿ ಲೋಕಸಭೆಗೆ ಭರವಸೆ ನೀಡಿದ್ದರು. ಜಾತಿ ಜನಗಣತಿ ನಡೆಯಬೇಕು ಎಂದು ಹೆಚ್ಚಿನ ರಾಜಕೀಯ ಪಕ್ಷಗಳು ಒತ್ತಾಯಿಸಿದ್ದವು. ಈ ವಿಷಯದ ಬಗ್ಗೆ ಚರ್ಚಿಸಲು ಸಚಿವರ ಗುಂಪನ್ನು ರಚಿಸಲಾಗಿತ್ತು. ಆದರೆ, ಇದರ ಹೊರತಾಗಿಯೂ, ಕಾಂಗ್ರೆಸ್ ಸರ್ಕಾರವು ಜಾತಿ ಜನಗಣತಿಯ ಬದಲು ಕೇವಲ ಸಮೀಕ್ಷೆ ನಡೆಸಲು ನಿರ್ಧರಿಸಿತ್ತು’ ಎಂದರು. 

ನಮಗೆ ಜನರ ಗಣತಿ ಬೇಕು: ರಾಹುಲ್‌ 

ಜನಗಣತಿಯೊಂದಿಗೆ ಜಾತಿ ಗಣತಿ ನಡೆಸುವ ಕೇಂದ್ರದ ‘ಹಠಾತ್‌’ ನಿರ್ಧಾರವನ್ನು ಸ್ವಾಗತಿಸಿದ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ‘ನಮಗೆ ಜನರ ಜನಗಣತಿ ಬೇಕು, ಅಧಿಕಾರಿಗಳ ಜನಗಣತಿಯಲ್ಲ’ ಎಂದರು. 

ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಪ್ರಕ್ರಿಯೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಈ ಪ್ರಕ್ರಿಯೆಯನ್ನು ಯಾವಾಗ ಮಾಡಲಾಗುತ್ತದೆ ಎಂಬುದನ್ನು ಸರ್ಕಾರ ತಿಳಿಸಬೇಕು’ ಎಂದು ಒತ್ತಾಯಿಸಿದರು. ಜನಗಣತಿ ನಡೆಸಲು ಸರ್ಕಾರ ಅಗತ್ಯ ಅನುದಾನ ಮಂಜೂರು ಮಾಡಬೇಕು ಎಂದು ಅವರು ಆಗ್ರಹಿಸಿದರು. 

‘ದೇಶದಾದ್ಯಂತ ಜಾತಿ ಗಣತಿ ನಡೆಯಬೇಕು ಎಂಬುದು ನಮ್ಮ ಬಹುದಿನದ ಬೇಡಿಕೆ. ಈ ನಿಟ್ಟಿನಲ್ಲಿ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ. ತೆಲಂಗಾಣದ ಜಾತಿ ಗಣತಿಯು ಮಾದರಿಯಾದುದು’ ಎಂದರು. ಬಿಹಾರ ವಿಧಾನಸಭಾ ಚುನಾವಣೆಯ ಕಾರಣಕ್ಕೆ ಜಾತಿ ಗಣತಿ ನಡೆಸಲು ಸರ್ಕಾರ ಮುಂದಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು. 

ಜನಗಣತಿಗೆ ಇನ್ನೂ ನಿಗದಿಯಾಗದ ಮುಹೂರ್ತ 

ಕೇಂದ್ರ ಸರ್ಕಾರದ ಈ ಸಾಲಿನ ಬಜೆಟ್‌ನಲ್ಲಿ ಜನಗಣತಿ ಉದ್ದೇಶಕ್ಕೆ ಕೇವಲ ₹574.80 ಕೋಟಿ ಹಣ ಹಂಚಿಕೆ ಮಾಡಲಾಗಿದೆ. ಜನಗಣತಿ ಪ್ರಕ್ರಿಯೆ ವಿಳಂಬಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರನೇ ಅವಧಿಯಲ್ಲೂ ಜನಗಣತಿಯ ಮೂಲಕ ಮಹತ್ವದ ದತ್ತಾಂಶ ಸಂಗ್ರಹಕ್ಕೆ ಇನ್ನೂ ಹಸಿರು ನಿಶಾನೆ ತೋರಿಲ್ಲ. 

ಜನಗಣತಿಯನ್ನು ಹತ್ತು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. 2019ರ ಡಿಸೆಂಬರ್‌ 24ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2021ರಲ್ಲಿ₹8,754.23 ಕೋಟಿ ವೆಚ್ಚದಲ್ಲಿ ಜನಗಣತಿ ಮತ್ತು ₹3,941.35 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಜನಸಂಖ್ಯೆ ನೋಂದಣಿಯ ಪರಿಷ್ಕರಣೆ ನಡೆಸಲು ಒಪ್ಪಿಗೆ ಸೂಚಿಸಿತ್ತು. 

ದೇಶದಾದ್ಯಂತ 2020ರ ಏಪ್ರಿಲ್‌ 1ರಿಂದ ಸೆಪ್ಟೆಂಬರ್‌ 30ರ ನಡುವೆ ಮನೆ ಮನೆಗೆ ತೆರಳಿ ಜನಗಣತಿ ಮತ್ತು ಎನ್‌ಪಿಆರ್‌ ಪರಿಷ್ಕರಿಸುವ ಕಾರ್ಯ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿತ್ತು. ಆದರೆ, ಕೋವಿಡ್‌–19 ಸಾಂಕ್ರಾಮಿಕದ ಕಾರಣದಿಂದ ಅದನ್ನು ಮುಂದೂಡಲಾಗಿತ್ತು.

ಕೋವಿಡ್‌ ಹಾವಳಿ ಮುಗಿದ ನಂತರವೂ ಜನಗಣತಿಯನ್ನು ತಡೆ ಹಿಡಿಯಲಾಗಿದ್ದು, ಸರ್ಕಾರ ಹೊಸ ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ. ಅಧಿಕಾರಿಗಳ ಪ್ರಕಾರ, ಜನಗಣತಿ ಮತ್ತು ಎನ್‌ಪಿಆರ್‌ ಪ್ರಕ್ರಿಯೆಗೆ ₹12 ಸಾವಿರ ಕೋಟಿಗೂ ಹೆಚ್ಚು ವೆಚ್ಚವಾಗಲಿದೆ. ಜನಗಣತಿಯ ಪ್ರಕ್ರಿಯೆ ಮುಗಿಯಲು ಕನಿಷ್ಠ ಒಂದೂವರೆ ವರ್ಷ ಬೇಕು. 

ಜಾತಿ ಗಣತಿಯ ವೇಳಾಪಟ್ಟಿ ಘೋಷಣೆಯಾಗದ ಕಾರಣ 2024–25ನೇ ಸಾಲಿನಲ್ಲಿ ಅನುದಾನ ಹಂಚಿಕೆ ಕಡಿಮೆ ಮಾಡಲಾಗಿದೆ’ ಎಂದು ಗೃಹ ಸಚಿವಾಲಯವು ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿತ್ತು. ಜನಗಣತಿಗೆ ಸಂಬಂಧಿಸಿದ ಹಲವು ಪೂರ್ವಸಿದ್ಧತಾ ಕಾರ್ಯಗಳು ಪೂರ್ಣಗೊಂಡಿವೆ ಎಂದೂ ಮಾಹಿತಿ ನೀಡಿತ್ತು. 

ಡಿಜಿಟಲ್‌ ಜನಗಣತಿ:

ಜನಗಣತಿ ಯಾವಾಗ ನಡೆದರೂ, ಈ ಬಾರಿಯದ್ದು ಮೊದಲ ಡಿಜಿಟಲ್‌ ಜನಗಣತಿಯಾಗಿರಲಿದೆ. ದೇಶದ ಪ್ರಜೆಗಳಿಗೆ ವಿವರಗಳನ್ನು ಸ್ವತಃ ನಮೂದಿಸಲು ಇದು ಅವಕಾಶ ನೀಡಲಿದೆ.

ಸರ್ಕಾರದ ಗಣತಿಗಾರರ ಬದಲಿಗೆ ತಾವೇ ಗಣತಿಯ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಬಯಸಿದ ನಾಗರಿಕರು ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ಇದಕ್ಕಾಗಿ ಸರ್ಕಾರ ಸ್ವಯಂ–ಗಣತಿ ಪೋರ್ಟಲ್‌ ಅನ್ನು ರೂಪಿಸಿದೆ. ಆದರೆ, ಅದಿನ್ನೂ ಉದ್ಘಾಟನೆಯಾಗಿಲ್ಲ. ಸ್ವಯಂ–ಗಣತಿ ವೇಳೆ ಆಧಾರ್‌ ಸಂಖ್ಯೆ ಅಥವಾ ಮೊಬೈಲ್‌ ನಂಬರ್‌ ವಿವರವನ್ನು ಕಡ್ಡಾಯವಾಗಿ ಸಂಗ್ರಹಿಸಲಾಗುತ್ತದೆ.

ಸದ್ಯ ಲಭ್ಯವಿರುವ ದತ್ತಾಂಶಗಳು ಹಾಗೂ ಜಾರಿಯಲ್ಲಿರುವ ಯೋಜನೆಗಳನ್ನು 2011ರ ಜನಗಣತಿ ಪ್ರಕಾರ ಇದ್ದ ಜನಸಂಖ್ಯೆಗೆ ಅನುಗುಣವಾಗಿ ರೂಪಿಸಲಾಗಿದೆ.

ಜಾತಿಗಣತಿಯ ಈ ಮಹತ್ವದ ಹೆಜ್ಜೆಯಿಂದ ಭಾರತವು ಅಧಿಕೃತ, ವೈಜ್ಞಾನಿಕ ಮತ್ತು ಪಾರದರ್ಶಕವಾದ ಜಾತಿ ದತ್ತಾಂಶ ಹೊಂದಲಿದೆ. ಕೇವಲ ರಾಜಕೀಯ ಪ್ರೇರಿತ ರಾಜ್ಯ ಮಟ್ಟದ ಸಮೀಕ್ಷೆಗಳು ವಿಶ್ವಾಸಾರ್ಹತೆ, ಏಕರೂಪತೆ ಹೊಂದಿರುವುದಿಲ್ಲ
ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ
ಜನಗಣತಿಯೊಂದಿಗೆ ಜಾತಿ ಗಣತಿ ನಡೆಸಬೇಕು ಎಂಬುದು ಕಾಂಗ್ರೆಸ್‌ನ ಬಹುದಿನದ ಬೇಡಿಕೆ ಆಗಿತ್ತು. ಸಾಮಾಜಿಕ ನ್ಯಾಯದಡಿ ಗಣತಿ ನಡೆಸಬೇಕು ಎಂದು ಪಕ್ಷ ಒತ್ತಾಯಿಸುತ್ತಲೇ ಬಂದಿದೆ. ಅಹಮದಾಬಾದ್‌ನಲ್ಲಿ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲೂ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು
ಜೈರಾಮ್ ರಮೇಶ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ
ಸಂಪೂರ್ಣ ಪಾರದರ್ಶಕತೆಯೊಂದಿಗೆ ಜಾತಿ ಜನಗಣತಿ ಪ್ರಾರಂಭಿಸಲು ಕೇಂದ್ರ ಸರ್ಕಾರವು ಹಣ ಮಂಜೂರು ಮಾಡಬೇಕು. ಜಾತಿ ಜನಗಣತಿ ಬಹು ಅಗತ್ಯ. ಸಾಮಾಜಿಕ ನ್ಯಾಯದ ಈ ನೀತಿಯ ಅನುಷ್ಠಾನವನ್ನು ಪ್ರಧಾನಿ ತಪ್ಪಿಸುತ್ತಿದ್ದಾರೆ
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.