ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್
ಪಿಟಿಐ ಚಿತ್ರ
ಇಂದೋರ್: ದೇಶದಲ್ಲಿ ದೀರ್ಘ ಅವಧಿಗೆ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಪಕ್ಷವು ಇತರ ಹಿಂದುಳಿದ ವರ್ಗದವರಿಗಾಗಿ ಏನನ್ನೂ ಮಾಡಿಲ್ಲ ಎಂದು ಟೀಕಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಜಾತಿಗಣತಿಯನ್ನು ನಿಲ್ಲಿಸಿದ್ದು ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಎಂದು ಆರೋಪಿಸಿದ್ದಾರೆ.
ರಾಜ್ಯದ ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಒಬಿಸಿ ಸಮುದಾಯದವರಿಗೆ ಶೇ 27 ಮೀಸಲಾತಿ ಜಾರಿಗೊಳಿಸಲು ಸರ್ಕಾರ ವಿಫಲವಾಗಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಆರೋಪಿಸಿದ್ದರು. ಅದಕ್ಕೆ ಪ್ರತಿಯಾಗಿ ಮೋಹನ್ ಯಾದವ್ ಭಾನುವಾರ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಎಂ, 'ಕಾಂಗ್ರೆಸ್ ಅಧ್ಯಕ್ಷರು ಈ ರೀತಿಯ ಸುಳ್ಳು ಆರೋಪಗಳನ್ನು ಮಾಡುವ ಮುನ್ನ, ತಮ್ಮ ಪಕ್ಷವು ಹಿಂದೆ ಏನೆಲ್ಲ ಮಾಡಿದೆ ಎಂಬುದನ್ನು ತಿಳಿದುಕೊಳ್ಳಬೇಕು. ದೇಶದಲ್ಲಿ ಜಾತಿಗಣತಿಯನ್ನು ಮೊದಲ ಪ್ರಧಾನಿ ನೆಹರೂ ಅವರು ನಿಲ್ಲಿಸಿದ್ದರು. ಕಾಂಗ್ರೆಸ್ ಸರ್ಕಾರ 55 ವರ್ಷ ಅಧಿಕಾರದಲ್ಲಿದ್ದರೂ, ಒಬಿಸಿಗಳ ಏಳಿಗೆಗೆ ಏನನ್ನೂ ಮಾಡಿಲ್ಲ' ಎಂದು ಕಿಡಿಕಾರಿದ್ದಾರೆ.
ಒಬಿಸಿ ಸಮುದಾಯದ ಯಾದವ್, ದೇಶದ ಪ್ರಧಾನಿಯೂ (ನರೇಂದ್ರ ಮೋದಿ) ಒಬಿಸಿ ಸಮುದಾಯಕ್ಕೆ ಸೇರಿದವರು ಎಂದು ಒತ್ತಿ ಹೇಳಿದ್ದಾರೆ.
'ಬಿಜೆಪಿಯು ಒಬಿಸಿಗೆ ಸೇರಿದ ನಾಲ್ವರು ಮುಖ್ಯಮಂತ್ರಿಗಳನ್ನು ನೀಡಿದೆ. ಆದರೆ, ಕಾಂಗ್ರೆಸ್ ಆ ಸಮುದಾಯದ ಒಬ್ಬರನ್ನೂ ಮುಖ್ಯಮಂತ್ರಿ ಮಾಡಿಲ್ಲ' ಎಂದು ಟೀಕಿಸಿದ್ದಾರೆ.
ದೇಶದಾದ್ಯಂತ ಮಹಿಳೆಯರ ಮೇಲೆ ಕಾಂಗ್ರೆಸ್ ದೌರ್ಜನ್ಯ
1997ರಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀಡಾದ ಕಾಂಗ್ರೆಸ್ ನಾಯಕಿ ಸರಳಾ ಮಿಶ್ರಾ ಪ್ರಕರಣವನ್ನು ಪ್ರಸ್ತಾಪಿಸಿದ ಯಾದವ್, ಸದ್ಯ ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿತ್ತು ಎಂದು ದೂರಿದ್ದಾರೆ.
'ಕಾಂಗ್ರೆಸ್ ಇಲ್ಲಿ (ಮಧ್ಯಪ್ರದೇಶದಲ್ಲಿ) ಮಾತ್ರವಲ್ಲ, ದೇಶದಾದ್ಯಂತ ಮಹಿಳೆಯರ ವಿರುದ್ಧ ದೌರ್ಜನ್ಯ ನಡೆಸಿರುವುದನ್ನು ಮರೆಮಾಚಲು ಸಾಧ್ಯವೇ ಇಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.
ಸರಳಾ ಮಿಶ್ರಾ ಪ್ರಕರಣವನ್ನು ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಪೊಲೀಸರು ಸಲ್ಲಿಸಿದ್ದ ವರದಿಯನ್ನು ಇತ್ತೀಚೆಗೆ ತಿರಸ್ಕರಿಸಿರುವ ಭೋಪಾಲ್ ಜಿಲ್ಲಾ ನ್ಯಾಯಾಲಯವು ಮರುತನಿಖೆಗೆ ಆದೇಶಿಸಿದೆ.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ನ್ಯಾಯಾಂಗದ ಕುರಿತು ನೀಡಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಈಗಾಗಲೇ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.