ADVERTISEMENT

ಬಾಂಗ್ಲಾದೇಶಕ್ಕೆ ಗೋವುಗಳ ಕಳ್ಳಸಾಗಣೆ ಸಂಪೂರ್ಣ ಸ್ಥಗಿತ: ಬಿಎಸ್‌ಎಫ್‌ ವರದಿ

ಪಿಟಿಐ
Published 17 ಜೂನ್ 2021, 16:27 IST
Last Updated 17 ಜೂನ್ 2021, 16:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋಲ್ಕತ್ತ/ನವದೆಹಲಿ: ಪಶ್ಚಿಮ ಬಂಗಾಳದಿಂದ ನೆರೆಯ ಬಾಂಗ್ಲಾದೇಶಕ್ಕೆ ಗೋವುಗಳ ಕಳ್ಳಸಾಗಣೆ ಮೇಲೆ ಸಂಪೂರ್ಣವಾಗಿ ಕಡಿವಾಣ ಹಾಕಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಮೂಲಗಳು ಹೇಳಿವೆ.

ಮೇ ತಿಂಗಳಿನಿಂದ ಗಡಿ ಮೂಲಕ ಒಂದೇ ಒಂದು ಗೋವಿನ ಕಳ್ಳಸಾಗಣೆ ನಡೆದಿಲ್ಲ ಎಂದು ಬಿಎಸ್‌ಎಫ್‌ನ ದಾಖಲೆಗಳು ಹೇಳುತ್ತವೆ.

ಪಶ್ಷಿಮ ಬಂಗಾಳದ ದಕ್ಷಿಣ ಪ್ರದೇಶವು ಗೋವುಗಳ ಕಳ್ಳಸಾಗಣೆಗೆ ಕುಖ್ಯಾತಿ ಗಳಿಸಿತ್ತು. ಗೋವುಗಳ ಕಳ್ಳಸಾಗಣೆಯನ್ನು ಸಂಪೂರ್ಣ ನಿಲ್ಲಿಸಲಾಗುವುದು ಎಂದು 2014ರಲ್ಲಿ ಅಧಿಕಾರಕ್ಕೆ ಬಂದಾಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಘೋಷಿಸಿತ್ತು. ಈಗ ಈ ಘೋಷಣೆ ಕಾರ್ಯರೂಪಕ್ಕೆ ಬಂದಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಬಾಂಗ್ಲಾದೇಶಕ್ಕೆ ಹೊಂದಿಕೊಂಡಂತೆ ಭಾರತದ ಐದು ರಾಜ್ಯಗಳು ಒಟ್ಟು 4,095 ಕಿ.ಮೀ. ಉದ್ದದಷ್ಟು ಗಡಿ ಹಂಚಿಕೊಂಡಿವೆ. ಈ ಪೈಕಿ, ಗೋವುಗಳ ಕಳ್ಳಸಾಗಣೆ ನಡೆಯುತ್ತಿದ್ದ, 913.32 ಕಿ.ಮೀ ಉದ್ದದ ಗಡಿಯನ್ನು ಕಾಯುವ ಹೊಣೆಯನ್ನು ಬಿಎಸ್‌ಎಫ್‌ಗೆ ವಹಿಸಲಾಗಿತ್ತು.

‘ಕಳ್ಳ ಸಾಗಣೆ ನಿಲ್ಲಿಸಲು ಮೂರು ಹಂತಗಳ ಕಾರ್ಯಾಚರಣೆಯನ್ನು ಅಳವಡಿಸಿಕೊಳ್ಳಲಾಗಿತ್ತು. ಈ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಯನ್ನು ಉತ್ತೇಜಿಸುವುದು, ಕಳ್ಳಸಾಗಣೆ ಮಾಡುವವರೊಂದಿಗೆ ಸಂಪರ್ಕ ಹೊಂದಿರುವ ಸಿಬ್ಬಂದಿಯನ್ನು ಗುರುತಿಸುವುದು ಹಾಗೂ ಹೊಸ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುವ ಮೂಲಕ ಈ ಕಾರ್ಯವನ್ನು ಸಾಧಿಸಲಾಗಿದೆ’ ಎಂದು ಬಿಎಸ್‌ಎಫ್‌ನ ಸಿಐಜಿ ಅಶ್ವಿನಿಕುಮಾರ್‌ ಸಿಂಗ್‌ ಹೇಳಿದರು.

ಗೋವುಗಳ ಕಳ್ಳಸಾಗಣೆಗೆ ಕಡಿವಾಣ ಬಿದ್ದ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದಲ್ಲಿನ ಚರ್ಮ, ಗೋ ಮಾಂಸ ಮಾರಾಟ ಹಾಗೂ ಪಿಂಗಾಣಿ ಉದ್ದಿಮೆಗಳು ನಷ್ಟ ಅನುಭವಿಸಿವೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.