ನವದೆಹಲಿ: ಇಲ್ಲಿನ ಫ್ರೆಂಚ್ ರಾಯಭಾರ ಕಚೇರಿಯ ವೀಸಾ ವಿಭಾಗದ ಕಾನೂನು ಅಧಿಕಾರಿ ಶುಭಂ ಶೊಕೀನ್ ವಿರುದ್ಧ ಸಿಬಿಐ ದೋಷಾರೋಪಣ ಪಟ್ಟಿ ಸಲ್ಲಿಸಿದೆ.
ಪಂಜಾಬ್‌ನ ಕೆಲವು ಅರ್ಜಿದಾರರು ವೀಸಾ ಏಜೆಂಟರ ಮೂಲಕ ಅಲ್ಪಾವಧಿ ವಾಸ್ತವ್ಯದ ವೀಸಾಕ್ಕಾಗಿ (ಷೆಂಗೆನ್ ವೀಸಾ) ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಅಧಿಕಾರಿ ಭಾರಿ ಪ್ರಮಾಣದ ಹಣಕ್ಕಾಗಿ ಬೇಡಿಕೆ ಇರಿಸಿದ್ದರು. ಶುಭಂ ಶೊಕೀನ್ ಕುಟುಂಬದ ಮೂವರು ಮತ್ತು ಇತರ ನಾಲ್ವರ ವಿರುದ್ಧವೂ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿದೆ.
ಕಾನೂನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅಧಿಕಾರಿ ದೇಶ ತೊರೆಯುವ ಸಾಧ್ಯತೆ ಇದ್ದಿದ್ದರಿಂದ ಸಿಬಿಐ ಅವರ ವಿರುದ್ಧ ನಿಗಾ ವಹಿಸಿತ್ತು.
‘ಪಂಜಾಬ್‌ನ ಕೆಲವು ವೀಸಾ ಏಜೆಂಟರು, ಷೆಂಗನ್ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗಳಿಂದ ತಲಾ ₹13 ಲಕ್ಷದಿಂದ ರಿಂದ ₹45 ಲಕ್ಷದವರೆಗೆ ಹಣ ಸಂಗ್ರಹಿಸಿ ಅಧಿಕಾರಿಗೆ ನೀಡುತ್ತಿದ್ದರು. ಅಧಿಕಾರಿ ಅವರ ದಾಖಲೆಗಳನ್ನು ಪರಿಶೀಲಿಸಿ, ವೀಸಾ ವಿತರಿಸುತ್ತಿದ್ದರು. ವೀಸಾ ಹಂಚಿಕೆ ಪ್ರಕ್ರಿಯೆ ಮುಗಿದ ನಂತರ ಆರೋಪಿಯು ಅರ್ಜಿದಾರರಿಗೆ ಸಂಬಂಧಿಸಿದ ಎಲ್ಲ ದಾಖಲೆ, ಕಡತಗಳನ್ನು ನಾಶಪಡಿಸುತ್ತಿದ್ದರು’ ಎಂದು ಸಿಬಿಐ ಹೇಳಿದೆ.
ಶುಭಂ ಶೊಕೀನ್ ವಿರುದ್ಧ ಸತತ ಮೂರು ವರ್ಷಗಳಿಂದ ತನಿಖೆ ನಡೆಸಿ, ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ ಬಳಿಕವೇ ಸಿಬಿಐ ದೋಷಾರೋಪಣೆ ಪಟ್ಟಿ ಸಲ್ಲಿಸಿದೆ. ಶೊಕೀನ್ ಪ್ರೆಂಚ್ ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಪಂಜಾಬ್, ದೆಹಲಿಯಲ್ಲಿ ಭಾರಿ ಪ್ರಮಾಣದಲ್ಲಿ ಆಸ್ತಿ, ನಗದು ಗಳಿಸಿದ್ದಾರೆ ಎಂದು ಸಿಬಿಐ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.