ಬಿಜೆಪಿ ಸೇರಿದ ಅನಿಲ್ ಸಹಾನಿ
- ಎಕ್ಸ್ ಚಿತ್ರ
ಪಟ್ನಾ: ವಂಚನೆ ಪ್ರಕರಣವೊಂದರಲ್ಲಿ ಸಿಬಿಐ ನ್ಯಾಯಾಲಯದಲ್ಲಿ ದೋಷಿ ಎಂದು ಸಾಬೀತಾಗಿ ಕಳೆದ ವರ್ಷ ಶಾಸಕ ಸ್ಥಾನ ಕಳೆದುಕೊಂಡಿದ್ದ ಆರ್ ಜೆಡಿಯ ಮಾಜಿ ನಾಯಕ ಅನಿಲ್ ಸಹಾನಿ ಬುಧವಾರ ಬಿಜೆಪಿ ಸೇರಿದ್ದಾರೆ.
ಬಿಹಾರ ಚುನಾವಣಾ ಉಸ್ತುವಾರಿಯೂ ಆಗಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಸಮ್ಮುಖದಲ್ಲಿ ಸಹಾನಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಈ ವೇಳೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಕೂಡ ಇದ್ದರು.
2012ರಲ್ಲಿ ಆರ್ ಜೆಡಿಯ ರಾಜ್ಯಸಭೆ ಸಭಾ ನಾಯಕನಾಗಿದ್ದ ಅವಧಿಯಲ್ಲಿ ಪ್ರಯಾಣ ಮಾಡದಿದ್ದರೂ, ರಜೆ ಪ್ರಯಾಣ ರಿಯಾಯಿತಿ ಪಡೆಯಲು ನಕಲಿ ವಿಮಾನ ಟಿಕೆಟ್ ಸಲ್ಲಿಸಿದ್ದ ಪ್ರಕರಣದಲ್ಲಿ ಸಿಬಿಐ ಕೋರ್ಟ್ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು.
2020ರ ವಿಧಾನಸಭೆ ಚುನಾವಣೆಯಲ್ಲಿ ಕುರ್ಹಾನಿ ಕ್ಷೇತ್ರದಿಂದ ಬಿಜೆಪಿ ಸ್ಪರ್ಧಿ ಕೇದರ್ ಗುಪ್ತಾ ಅವರನ್ನು 900 ಮತಗಳಿಂದ ಸೋಲಿಸಿದ್ದರು. 2024ರಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಗೆದ್ದಿದ್ದ ಗುಪ್ತಾ, ನಂತರ ಸಚಿವರೂ ಆದರು.
ಮುಜಾಫರ್ ಪುರದಲ್ಲಿ ಭಾರಿ ಹಿಂದುಳಿದ ಜಾತಿಯಾಗಿರುವ ‘ನಿಶಾದ್’ ಸಮುದಾಯದ ಮತದಾರರನ್ನು ಸೆಳೆಯಲು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.