ADVERTISEMENT

ಸೈಬರ್‌ ಅಪರಾಧ: 10 ರಾಜ್ಯಗಳಲ್ಲಿ ಸಿಬಿಐ ಶೋಧ

ವಿದೇಶೀಯರಿಗೆ ವಂಚಿಸುತ್ತಿದ್ದ ಆರೋಪಿಗಳು: ಒಬ್ಬನ ಬಂಧನ

ಪಿಟಿಐ
Published 2 ಫೆಬ್ರುವರಿ 2026, 14:17 IST
Last Updated 2 ಫೆಬ್ರುವರಿ 2026, 14:17 IST
..
..   

ನವದೆಹಲಿ: ದೇಶದ 10 ರಾಜ್ಯಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ ಸಿಬಿಐ ಪ್ರಮುಖ ಸೈಬರ್‌ ಪ್ರಕರಣಗಳ ಆರೋಪಿಯೊಬ್ಬರನ್ನು ಬಂಧಿಸಿದೆ.

ಅಮೆರಿಕ, ಬ್ರಿಟನ್, ಕುವೈತ್‌, ಐರ್ಲೆಂಡ್‌ ಮತ್ತು ಸಿಂಗಪುರದ ತನಿಖಾ ಸಂಸ್ಥೆಗಳ ಸಹಕಾರದೊಂದಿಗೆ ‘ಸೈಸ್ಟ್ರೈಕ್‌’ ಎಂಬ ಕಾರ್ಯಾಚರಣೆಯನ್ನು ಜನವರಿ 30ರಂದು ಸಿಬಿಐ ಆರಂಭಿಸಿತ್ತು. ದೆಹಲಿ, ಬಿಹಾರ, ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್‌, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ 35 ಸ್ಥಳಗಳಲ್ಲಿ ಶೋಧ ನಡೆಸಿದೆ.

ಅಮೆರಿಕದ ಜನರನ್ನು ಗುರಿಯಾಗಿಸಿಕೊಂಡು ನವದೆಹಲಿಯಿಂದ ಸೈಬರ್ ಅಪರಾಧ ಕೃತ್ಯ ಎಸಗುತ್ತಿದ್ದ ಆರೋಪಿಗಳ ಜಾಲವನ್ನು ಸಿಬಿಐ ಭೇದಿಸಿದೆ. ‘ಎಲೆಕ್ಟ್ರಾನಿಕ್ ಸಾಧನಗಳು, ಲ್ಯಾಪ್‌ಟಾಪ್‌, ಮೊಬೈಲ್, ಕಂಪ್ಯೂಟರ್ ಮತ್ತು ಅಪರಾಧಕ್ಕೆ ಸಂಬಂಧಿಸಿದ ಡಿಜಿಟಲ್ ಸಾಕ್ಷ್ಯಗಳಿದ್ದ ಹಾರ್ಡ್‌ ಡಿಸ್ಕ್ ಅನ್ನು ಜಪ್ತಿ ಮಾಡಿ, ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಸಿಬಿಐ ತಿಳಿಸಿದೆ.

ADVERTISEMENT

ದೆಹಲಿ, ಗಾಜಿಯಾಬಾದ್‌ ಮತ್ತು ಕರ್ನಾಟಕದಿಂದ ಡಿಜಿಟಲ್ ವ್ಯವಸ್ಥೆ ಮೂಲಕ ಹಣ ವಂಚನೆ ಮಾಡುತ್ತಿದ್ದ ಮತ್ತೊಂದು ಜಾಲವನ್ನೂ ಸಿಬಿಐ ಪತ್ತೆ ಮಾಡಿದೆ. ‘ಆರೋಪಿಗಳು ‘eservicemoi-Kw.com’ ಹೆಸರಿನ ವೆಬ್‌ಸೈಟ್‌ ಮೂಲಕ ಕುವೈತ್‌ ಇ–ವೀಸಾ ಒದಗಿಸುವುದಾಗಿ ಮತ್ತು ಕುವೈತ್‌ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಈ ವೇಳೆ 60 ಲಕ್ಷ ನಗದು, ನಕಲಿ ವೀಸಾ ಮತ್ತು ಉದ್ಯೋಗ ನೇಮಕಾತಿ ಪತ್ರ, ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬ್ರಿಟನ್, ಐರ್ಲೆಂಡ್‌ ಮತ್ತು ಸಿಂಗಪುರದಲ್ಲಿರುವವರಿಗೂ ಆನ್‌ಲೈನ್‌ ಮೂಲಕ ವಂಚನೆ ಮಾಡುತ್ತಿದ್ದ ಜಾಲವೂ ಪತ್ತೆಯಾಗಿದೆ. ಅಪರಾಧಗಳಿಗೆ ಬಳಕೆ ಮಾಡಲಾಗುತ್ತಿದ್ದ ನಕಲಿ ಖಾತೆಗಳ ಮಾಹಿತಿ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.