ನವದೆಹಲಿ: ಕೇಂದ್ರ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇ.ಡಿ) ತನಿಖಾ ಸಂಸ್ಥೆಗಳ ದುರ್ಬಳಕೆ ಮೂಲಕ ದೆಹಲಿ ಸರ್ಕಾರವನ್ನು ಉರುಳಿಸಲು ಕೇಂದ್ರವು ಯತ್ನಿಸುತ್ತಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿಯ 'ಆಪರೇಷನ್ ಕಮಲ' ವಿಫಲಗೊಂಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ಹೇಳಿದ್ದಾರೆ.
ದೆಹಲಿಯ ಅಬಕಾರಿ ನೀತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಿವಾಸಕ್ಕೆ ದಾಳಿ ನಡೆಸಿತ್ತು.
ಸೋಮವಾರ ಈ ಕರಿತು ಹೇಳಿಕೆ ನೀಡಿರುವ ಸಿಸೋಡಿಯಾ, ಬಿಜೆಪಿಗೆ ಸೇರಿದರೆ ಸಿಬಿಐ, ಇ.ಡಿಸೇರಿದಂತೆ ಎಲ್ಲ ಪ್ರಕರಣಗಳನ್ನು ಕೈಬಿಡುವುದಾಗಿ ಆಮಿಷ ಒಡ್ಡಿರುವುದಾಗಿ ಆರೋಪಿಸಿದರು.
ಬಳಿಕ ಸಿಸೋಡಿಯಾ ಟ್ವೀಟ್ ರೀಟ್ವೀಟ್ ಮಾಡಿರುವ ಕೇಜ್ರಿವಾಲ್, ಅಂದರೆ ಸಿಬಿಐ-ಇ.ಡಿ ದಾಳಿಗೂ ಅಬಕಾರಿ ನೀತಿ ಹಾಗೂ ಭ್ರಷ್ಟಾಚಾರಕ್ಕೂ ಯಾವುದೇ ಸಂಬಂಧವಿಲ್ಲವೇ? ಬೇರೆ ರಾಜ್ಯದಲ್ಲಿ ಮಾಡಿದಂತೆ ದೆಹಲಿಯಲ್ಲಿ ಎಎಪಿ ಸರ್ಕಾರವನ್ನು ಉರುಳಿಸಲು ದಾಳಿ ನಡೆಸಲಾಗಿದೆಯೇ ? ಎಂದು ಕೇಳಿದ್ದಾರೆ.
ದೆಹಲಿಯಲ್ಲಿ 'ಆಪರೇಷನ್ ಕಮಲ' ವಿಫಲಗೊಂಡಿದೆ ಎಂದು ಮಗದೊಂದು ಟ್ವೀಟ್‌ನಲ್ಲಿ ಕೇಜ್ರಿವಾಲ್ ಉಲ್ಲೇಖಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೋಮವಾರ, ಗುಜರಾತ್‌ಗೆ ಭೇಟಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.