ADVERTISEMENT

ಪಶ್ಚಿಮ ಬಂಗಾಳದಲ್ಲಿ ಸಿಬಿಐ ಅಧಿಕಾರಿಗಳನ್ನೇ ವಶಕ್ಕೆ ತೆಗೆದುಕೊಂಡ ಪೊಲೀಸರು

ಕೋಲ್ಕತ್ತ ಪೊಲೀಸ್‌ ಕಮಿಷನರ್‌ ನಿವಾಸದ ಹೊರಗೆ ನಾಟಕೀಯ ಬೆಳವಣಿಗೆ

ಪಿಟಿಐ
Published 3 ಫೆಬ್ರುವರಿ 2019, 20:19 IST
Last Updated 3 ಫೆಬ್ರುವರಿ 2019, 20:19 IST
ಕೋಲ್ಕತ್ತ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ಅವರನ್ನು ವಿಚಾರಣೆಗೆ ಒಳಪಡಿಸಲು ಭಾನುವಾರ ಅವರ ನಿವಾಸಕ್ಕೆ ಬಂದಿದ್ದ ಸಿಬಿಐ ಅಧಿಕಾರಿಗಳನ್ನು ವಶಕ್ಕೆ ಪಡೆದು ಕರೆದೊಯ್ದ ಪಶ್ಚಿಮ ಬಂಗಾಳ ಪೊಲೀಸರು   –ಪಿಟಿಐ ಚಿತ್ರ
ಕೋಲ್ಕತ್ತ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ಅವರನ್ನು ವಿಚಾರಣೆಗೆ ಒಳಪಡಿಸಲು ಭಾನುವಾರ ಅವರ ನಿವಾಸಕ್ಕೆ ಬಂದಿದ್ದ ಸಿಬಿಐ ಅಧಿಕಾರಿಗಳನ್ನು ವಶಕ್ಕೆ ಪಡೆದು ಕರೆದೊಯ್ದ ಪಶ್ಚಿಮ ಬಂಗಾಳ ಪೊಲೀಸರು   –ಪಿಟಿಐ ಚಿತ್ರ   

ಕೋಲ್ಕತ್ತ: ಚಿಟ್‌ ಫಂಡ್‌ ಹಗರಣದಲ್ಲಿ ಕೋಲ್ಕತ್ತ ನಗರ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ಅವರ ವಿಚಾರಣೆಗೆ ಭಾನುವಾರ ಅವರ ನಿವಾಸಕ್ಕೆ ತೆರಳಿದ್ದ ಸಿಬಿಐ ಅಧಿಕಾರಿಗಳನ್ನೇ ಪೊಲೀಸರು ವಶಕ್ಕೆ ಪಡೆದ ನಾಟಕೀಯ ಮತ್ತು ಅಪರೂಪದ ಘಟನೆ ನಡೆದಿದೆ.

ರೋಸ್‌ ವ್ಯಾಲಿ, ಶಾರದಾ ಚಿಟ್‌ ಫಂಡ್‌ ಹಗರಣಕ್ಕೆ ಸಂಬಂಧಿಸಿದ ಕಡತ ಮತ್ತು ದಾಖಲೆ ಕಣ್ಮರೆಯಾದ ಬಗ್ಗೆ ಪ್ರಶ್ನಿಸಲು ಸಿಬಿಐ ಅಧಿಕಾರಿಗಳ ತಂಡ ಲಂಡನ್‌ ಸ್ಟ್ರೀಟ್‌ನಲ್ಲಿರುವ ಪೊಲೀಸ್‌ ಕಮಿಷನರ್‌ ನಿವಾಸಕ್ಕೆ ತೆರಳಿತ್ತು.

ನಿವಾಸದ ಹೊರಗೆ ಸಿಬಿಐ ಅಧಿಕಾರಿಗಳನ್ನು ತಡೆದ ರಾಜ್ಯ ಪೊಲೀಸರು ಜೀಪಿನಲ್ಲಿ ಅವರನ್ನು ಠಾಣೆಗೆ ಕರೆದೊಯ್ದರು. ಇದರಿಂದ ಪೊಲೀಸ್‌ ಮುಖ್ಯಸ್ಥರ ನಿವಾಸದ ಹೊರಗೆ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು.

ADVERTISEMENT

ಇದರ ಬೆನ್ನಲ್ಲೇ ಕೋಲ್ಕತ್ತ ಪೊಲೀಸ್‌ ಅಧಿಕಾರಿಗಳ ತಂಡವೊಂದು ಸಿಜಿಒ ಕಾಂಪ್ಲೆಕ್ಸ್‌ನಲ್ಲಿರುವ ಸಿಬಿಐ ಕಚೇರಿಗೆ ಧಾವಿಸಿ, ವಿಚಾರಣೆ ನಡೆಸಿತು. ಈ ನಡುವೆ ಕಮಿಷನರ್‌ ನಿವಾಸಕ್ಕೆ ಬಂದಿಳಿದ ಸಿಬಿಐ ಅಧಿಕಾರಿಗಳ ಮತ್ತೊಂದು ತಂಡವನ್ನೂ ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ಯಲಾಯಿತು.

ಆರೋಪ–ಪ್ರತ್ಯಾರೋಪ:‘ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ’ ಎಂದು ಸಿಬಿಐ ಅಧಿಕಾರಿಗಳು ಇದಕ್ಕೂ ಮೊದಲು ಹೇಳಿದ್ದರು. ಈ ಆರೋಪವನ್ನು ಪೊಲೀಸ್‌ ಇಲಾಖೆ ತಳ್ಳಿ ಹಾಕಿದೆ.

ಕರ್ತವ್ಯದ ಮೇಲೆ ತೆರಳಿದ್ದ ಸಿಬಿಐ ಅಧಿಕಾರಿಗಳನ್ನು ಬಲವಂತವಾಗಿ ಠಾಣೆಗೆ ಕರೆದೊಯ್ದು ನಂತರ ಬಂಧಿಸಲಾಗಿದೆ ಎಂದು ಸಿಬಿಐ ಆರೋಪ ಮಾಡಿದೆ.

ಈ ಆರೋಪಗಳನ್ನು ತಳ್ಳಿ ಹಾಕಿರುವ ಪೊಲೀಸರು, ಸಿಬಿಐ ಅಧಿಕಾರಿಗಳ ಬಳಿ ಅಗತ್ಯ ದಾಖಲೆಗಳಿವೆಯೇ ಎಂದು ಪರಿಶೀಲಿಸಲು ಅವರನ್ನು ಠಾಣೆಗೆ ಕರೆದೊಯ್ಯಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ರಾಜೀವ್‌ ಬೆಂಬಲಕ್ಕೆ ಮಮತಾ ಬ್ಯಾನರ್ಜಿ

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಜಿಪಿ ವಿರೇಂದರ್‌ ಮತ್ತು ಎಡಿಜಿಪಿ ಅನುಜ್‌ ಶರ್ಮಾ ಅವರು ಕಮಿಷನರ್‌ ನಿವಾಸಕ್ಕೆ ಧಾವಿಸಿದರು.

ರಾಜೀವ್‌ ಕುಮಾರ್‌ ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ. ಅವರಿಗೆ ಒಳ್ಳೆಯ ಹೆಸರಿದೆ. ರಾಜ್ಯ ಸರ್ಕಾರ ಅವರ ಬೆನ್ನಿಗೆ ಇದೆ ಎಂದು ಮಮತಾ ಬೆಂಬಲ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪೊಲೀಸರು ಮತ್ತು ಇತರ ಸಂಸ್ಥೆಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಸಿಬಿಐಯನ್ನು ಬಳಸಿಕೊಳ್ಳುತ್ತಿದೆ’ ಎಂದರು.

ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಲು ಯತ್ನಿಸುತ್ತಿದೆ. 40 ಸಿಬಿಐ ಅಧಿಕಾರಿಗಳು ಪೊಲೀಸ್‌ ಕಮಿಷನರ್‌ ನಿವಾಸವನ್ನು ಸುತ್ತುವರಿದಿದ್ದರು ಎಂದು ಟಿಎಂಸಿ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.