ADVERTISEMENT

ಸಿಸೋಡಿಯಾ ಮನೆಯಲ್ಲಿ ಪೆನ್ಸಿಲ್‌, ನೋಟ್‌ಬುಕ್‌ಗಳು ಸಿಗಲಿವೆ: ರಾಘವ್‌ ಚಡ್ಡಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಆಗಸ್ಟ್ 2022, 11:44 IST
Last Updated 19 ಆಗಸ್ಟ್ 2022, 11:44 IST
ರಾಘವ್‌ ಚಡ್ಡಾ
ರಾಘವ್‌ ಚಡ್ಡಾ   

ನವದೆಹಲಿ: ದೆಹಲಿ ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಮನೀಶ್‌ ಸಿಸೋಡಿಯಾ ಮನೆಯ ಮೇಲೆ ಸಿಬಿಐ ದಾಳಿ ಶುಕ್ರವಾರ ನಡೆಸಿದೆ.

ಈ ವಿಚಾರವಾಗಿ ವ್ಯಂಗ್ಯವಾಡಿರುವ ಎಎಪಿ ಯುವ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ರಾಘವ್‌ ಚಡ್ಡಾ, ಸಿಸೋಡಿಯಾ ನಿವಾಸದಲ್ಲಿ ಪೆನ್ಸಿಲ್‌ ಹಾಗೂ ನೋಟ್‌ಬುಕ್‌ಗಳು ದೊರೆಯಲಿವೆ ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿರುವ ಅವರು, ‘ಈ ಹಿಂದೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ನಾಲ್ಕು ಮಫ್ಲರ್‌ಗಳು ಪತ್ತೆಯಾಗಿವೆ. ಈಗ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೆ ದಾಳಿ ನಡೆಸಿರುವ ಸಿಬಿಐಗೆ ನಾಲ್ಕು ಪೆನ್ಸಿಲ್‌ಗಳು, ನೋಟ್‌ಬುಕ್‌ಗಳು ಮತ್ತು ಜಾಮಿಟ್ರಿ ಬಾಕ್ಸ್‌ಗಳು ಸಿಗಲಿವೆ’ ಎಂದು ಹೇಳಿದ್ದಾರೆ.

ಪಂಜಾಬ್‌ನಲ್ಲಿ ಎಎಪಿಯು ಬಹುಮತದ ಸರ್ಕಾರವನ್ನು ರಚಿಸಿದೆ. ಇದಾದ ನಂತರ, ದೇಶದ ಜನರು ಕೇಜ್ರಿವಾಲ್ ಅವರನ್ನು ಮೋದಿಗೆ ಪರ್ಯಾಯವಾಗಿ ಪರಿಗಣಿಸಲು ಪ್ರಾರಂಭಿಸಿದ್ದಾರೆ. ಕೇಜ್ರಿವಾಲ್ ಅವರು ರಾಜಕೀಯದಲ್ಲಿ ಬೆಳವಣಿಗೆ ಹೊಂದುತ್ತಿದ್ದಾರೆ. ಈ ಕುರಿತು ಬಿಜೆಪಿ ಮತ್ತು ಮೋದಿ ಭಯಗೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.

ADVERTISEMENT

ಕೇಜ್ರಿವಾಲ್ ಅವರಿಗೆ ಸಿಗುತ್ತಿರುವ ಜನಪ್ರಿಯತೆ ಮತ್ತು ಜನರ ಬೆಂಬಲ ದೇಶದ ಮೂಲೆ ಮೂಲೆಗಳನ್ನು ತಲುಪುತ್ತಿದೆ. ಜನರು ಕೇಜ್ರಿವಾಲ್ ಮಾದರಿಯ ಆಡಳಿತದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಚಡ್ಡಾ ಹೇಳಿದ್ದಾರೆ.

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ಅವರ ಮನೆ ಸಹಿತ ದೆಹಲಿ ಎನ್‌ಸಿಆರ್‌ನ 21 ಸ್ಥಳಗಳಲ್ಲಿ ದಾಳಿ ನಡೆಸಿರುವ ಸಿಬಿಐ, ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ಸಿಬಿಐ ದಾಳಿಯನ್ನು ಸ್ವಾಗತಿಸಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.