ಪರೀಕ್ಷೆ–ಪ್ರಾತಿನಿಧಿಕ ಚಿತ್ರ
ನವದೆಹಲಿ: 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಮುಂದಿನ ವರ್ಷ ಫೆಬ್ರುವರಿ 17ರಂದು ಬೋರ್ಡ್ ಪರೀಕ್ಷೆ ನಡೆಸಲು ನಿರ್ಧರಿಸಿರುವುದಾಗಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಬುಧವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.
10ನೇ ತರಗತಿ ವಿದ್ಯಾರ್ಥಿಗಳಿಗೆ ಒಂದೇ ಶೈಕ್ಷಣಿಕ ವರ್ಷದಲ್ಲಿ ಎರಡು ಬೋರ್ಡ್ ಪರೀಕ್ಷೆಗಳನ್ನು ನಡೆಸುವುದಾಗಿ ಸಿಬಿಎಸ್‌ಇ ಈ ಹಿಂದೆ ಘೋಷಿಸಿತ್ತು. ಅದರಂತೆ 2026ರ ಫೆಬ್ರುವರಿ17ರಿಂದ ಮಾರ್ಚ್ 26ರವರೆಗೆ ಮೊದಲ ಆವೃತ್ತಿಯ ಬೋರ್ಡ್ ಪರೀಕ್ಷೆ, ಮೇ15 ರಿಂದ ಜೂನ್ 1ರವರೆಗೆ ಎರಡನೇ ಆವೃತ್ತಿಯ ಬೋರ್ಡ್ ಪರೀಕ್ಷೆಗೆ ದಿನಾಂಕ ನಿಗದಿ ಪಡಿಸಿದೆ.
12ನೇ ತರಗತಿ ವಿದ್ಯಾರ್ಥಿಗಳಿಗೆ 2026ರ ಫೆಬ್ರುವರಿ 17ರಿಂದ ಏಪ್ರಿಲ್ 9ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸನ್ಯಮ್ ಭಾರದ್ವಾಜ್ ಅವರು ತಿಳಿಸಿದ್ದಾರೆ.
10ನೇ ತರಗತಿ ವಿದ್ಯಾರ್ಥಿಗಳು ಒಂದೇ ಶೈಕ್ಷಣಿಕ ವರ್ಷದಲ್ಲಿ ಎರಡು ಬೋರ್ಡ್ ಪರೀಕ್ಷೆಗಳನ್ನು ಎದುರಿಸುತ್ತಿರುವುದು ಇದೇ ಮೊದಲಾಗಿದ್ದು, ಎರಡೂ ಪರೀಕ್ಷೆಗಳನ್ನು ಸಂಪೂರ್ಣ ಪಠ್ಯದ ಆಧಾರದಲ್ಲೇ ನಡೆಸಲಾಗುತ್ತದೆ ಎಂದು ಸಿಬಿಎಸ್‌ಇ ಹೇಳಿದೆ. ಜತೆಗೆ ಎರಡನೇ ಬೋರ್ಡ್ ಪರೀಕ್ಷೆಯು ವಿದ್ಯಾರ್ಥಿಗಳ ಆಯ್ಕೆಯಾಗಿದ್ದು, ಅಂಕವನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ ಮಾತ್ರ ಆ ಪರೀಕ್ಷೆ ಬರೆಯಬಹುದು ಎಂದೂ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.