ನವದೆಹಲಿ: ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಸಿಬಿಎಸ್‌ಇ ಶಾಲೆಗಳಲ್ಲಿ ಧ್ವನಿ ಸಮೇತ ದೃಶ್ಯ ದಾಖಲಿಸುವ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಕಡ್ಡಾಯಗೊಳಿಸಿದೆ. ಶೌಚಾಲಯಗಳನ್ನು ಹೊರತುಪಡಿಸಿ ಇತರ ಎಲ್ಲಾ ಕಡೆಗಳಲ್ಲೂ ಸಿಸಿಟಿವಿ ಅಳವಡಿಸುವ ಸಂಬಂಧ ನಿಯಮಗಳಿಗೆ ಬದಲಾವಣೆ ತರಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
‘ವಿದ್ಯಾರ್ಥಿಗಳ ಸುರಕ್ಷತೆಯು ಶಾಲೆಗಳ ಪ್ರಮುಖ ಹೊಣೆಗಾರಿಕೆ. ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ತಡೆ ಹಾಗೂ ಗರಿಷ್ಠ ಪ್ರಮಾಣದ ಭದ್ರತೆ ಒದಗಿಸುವ ಉದ್ದೇಶದಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಆದೇಶಿಸಲಾಗಿದೆ’ ಎಂದು ಸಿಬಿಎಸ್‌ಇ ಕಾರ್ಯದರ್ಶಿ ಹಿಮಾಂಶು ಗುಪ್ತಾ ತಿಳಿಸಿದರು.
ಶಾಲೆಗಳ ಮಾನ್ಯತೆಯ ಬೈಲಾ–2018ರ ನಾಲ್ಕನೇ ಅಧ್ಯಾಯಕ್ಕೆ(ಭೌತಿಕ ಮೂಲಸೌಕರ್ಯ) ತಿದ್ದುಪಡಿ ತಂದು ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಡ್ಡಾಯ ಮಾಡಲಾಗಿದೆ.
ಬಹುತೇಕ ಪ್ರಕರಣಗಳಲ್ಲಿ ಬೆದರಿಕೆಯು ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡ ಹೆಚ್ಚಿಸುತ್ತಿದೆ. ನಿಂದನೆ, ಘರ್ಷಣೆ, ದೈಹಿಕ ಹಲ್ಲೆ, ಮಾನಸಿಕ ಕಿರುಕುಳ, ಪ್ರಕೃತಿ ಅಥವಾ ಮಾನವ ನಿರ್ಮಿತ ದುರಂತ, ಬೆಂಕಿ ಅವಘಡ, ಸಾರಿಗೆ ಸಮಸ್ಯೆ, ವಿಶೇಷವಾಗಿ ಭಾವನಾತ್ಮಕ ಸುರಕ್ಷತೆಗಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
* ಉನ್ನತ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು
* ಧ್ವನಿ ಸಮೇತ ದೃಶ್ಯ ಸಂಗ್ರಹ ಮಾಡುವಂತಿರಬೇಕು
* ಶಾಲೆಗಳ ಪ್ರವೇಶ–ನಿರ್ಗಮನ ಪ್ರದೇಶದಲ್ಲಿ ಅಳವಡಿಕೆ
* ಆವರಣ, ಮೆಟ್ಟಿಲುಗಳು, ಶಾಲಾ ಕೊಠಡಿಗಳಲ್ಲಿ ಕಡ್ಡಾಯ
* ಪ್ರಯೋಗಾಲಯ, ಕ್ಯಾಂಟೀನ್, ದಾಸ್ತಾನು ಕೊಠಡಿಯಲ್ಲೂ ಇರಬೇಕು
* ಆಟದ ಮೈದಾನ ಸೇರಿ ಇತರೆ ಪ್ರದೇಶಗಳಲ್ಲೂ ಅಳವಡಿಸಬೇಕು
* ಶೌಚಾಲಯ, ಕೈತೊಳೆಯುವ ಸ್ಥಳಗಳಲ್ಲಿ ಅಳವಡಿಸುವಂತಿಲ್ಲ
* ಕನಿಷ್ಠ 15 ದಿನಗಳವರೆಗಿನ (ಸಂಗ್ರಹ) ಬ್ಯಾಕಪ್ ಇರಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.