ADVERTISEMENT

ಮುಖ್ಯ ಚುನಾವಣಾ ಆಯುಕ್ತರ ಮಗಳೀಗ ನೋಯ್ಡಾದ ಮೊದಲ ಮಹಿಳಾ ಜಿಲ್ಲಾ ಮ್ಯಾಜಿಸ್ಟ್ರೇಟ್‌!

ಡೆಕ್ಕನ್ ಹೆರಾಲ್ಡ್
Published 2 ಆಗಸ್ಟ್ 2025, 2:42 IST
Last Updated 2 ಆಗಸ್ಟ್ 2025, 2:42 IST
<div class="paragraphs"><p>ಮೇಧಾ ರೂಪಮ್‌</p></div>

ಮೇಧಾ ರೂಪಮ್‌

   

ಕೃಪೆ: X/@MedhaRoopam

ನೋಯ್ಡಾ: 2014ರ ಬ್ಯಾಚ್‌ನ ಐಎಎಸ್‌ ಅಧಿಕಾರಿ ಮೇಧಾ ರೂಪಮ್‌ ಅವರು ನೋಯ್ಡಾದ ಗೌತಮ ಬುದ್ಧ ನಗರ ಜಿಲ್ಲೆಯ ಮ್ಯಾಜಿಸ್ಟ್ರೇಟ್‌ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆ ಮೂಲಕ ಅವರು, ಇಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಆದ ಮೊದಲ ಮಹಿಳೆ ಎನಿಸಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ರೂಪಮ್‌ ಅವರು, ಸದ್ಯ ಭಾರತದ ಮುಖ್ಯ ಚುನಾವಣಾ ಆಯುಕ್ತ ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ಜ್ಞಾನೇಶ್‌ ಕುಮಾರ್‌ ಅವರ ಪುತ್ರಿ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರ್ಕಾರವು ಇತ್ತೀಚೆಗೆ 23 ಐಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಅದರಂತೆ, ರೂಪಮ್‌ ಅವರು ಗೌತಮ ಬುದ್ಧ ನಗರಕ್ಕೆ ನೇಮಕಗೊಂಡಿದ್ದಾರೆ. ಇದಕ್ಕೂ ಮೊದಲು, ಆ ಹುದ್ದೆಯಲ್ಲಿದ್ದ ಮನೀಶ್‌ ಕುಮಾರ್‌ ವರ್ಮಾ ಅವರನ್ನು ಪ್ರಯಾಗರಾಜ್‌ಗೆ ವರ್ಗಾಯಿಸಲಾಗಿದೆ.

ರೂಪಮ್‌ ಅವರ ಪತಿ ಮನೀಶ್‌ ಬನ್ಸಾಲ್‌ ಕೂಡ 2014ರ ಸಾಲಿನ ಐಎಎಸ್‌ ಅಧಿಕಾರಿಯಾಗಿದ್ದು, ಶಹರಾನ್‌ಪುರದಲ್ಲಿ ಕರ್ತವ್ಯದಲ್ಲಿದ್ದಾರೆ.

ಆಗ್ರಾದಲ್ಲಿ ಜನಿಸಿದ ರೂಪಮ್‌ ಅವರು ದೆಹಲಿಯ ಪ್ರತಿಷ್ಠಿತ ಸೇಂಟ್‌ ಸ್ಟೀಫನ್ಸ್‌ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಆಡಳಿತಾತ್ಮಕ ವೃತ್ತಜೀವನದ ಹೊರತಾಗಿ ರೂಪಮ್‌ ಅವರು ರಾಷ್ಟ್ರ ಮಟ್ಟದ ರೈಫಲ್‌ ಶೂಟರ್‌ ಕೂಡ ಆಗಿದ್ದಾರೆ. 10 ಮೀ ಏರ್‌ ರೈಫಲ್‌ ಸ್ಪರ್ಧೆಯ ರಾಜ್ಯ ಮಟ್ಟದ ದಾಖಲೆ ಅವರ ಹೆಸರಲ್ಲಿದೆ.

ಬರೇಲಿಯಲ್ಲಿ ಸಹಾಯಕ ಮ್ಯಾಜಿಸ್ಟ್ರೇಟ್‌ ಆಗಿ ವೃತ್ತಿ ಜೀವನ ಆರಂಭಿಸಿದ್ದ ರೂಪಮ್‌, ನಂತರ ಮೀರತ್‌ ಮತ್ತು ಉನ್ನಾವೊದಲ್ಲಿ ಜಂಟಿ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸಿದ್ದರು. ಲಖನೌನಲ್ಲಿರುವ ಉತ್ತರ ಪ್ರದೇಶ ಆಡಳಿತ ಮತ್ತು ನಿರ್ವಹಣಾ ಅಕಾಡೆಮಿಯ ಜಂಟಿ ನಿರ್ದೇಶಕಿ, ಮಹಿಳಾ ಕಲ್ಯಾಣ ಇಲಾಖೆಯ ವಿಶೇಷ ಕಾರ್ಯದರ್ಶಿ ಮತ್ತು ಬಾರಾಬಂಕಿಯ ಮುಖ್ಯ ಅಭಿವೃದ್ಧಿ ಅಧಿಕಾರಿಯಾಗಿಯೂ ಕರ್ತವ್ಯ ನಿಭಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.