ADVERTISEMENT

ಸಾಲಿಸಿಟರ್ ಜನರಲ್ ಆಗಿ ಹಿರಿಯ ವಕೀಲ ಡಿ.ಪಿ.ಸಿಂಗ್, ರವೀಂದರ್ ಕುಮಾರ್ ನೇಮಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಡಿಸೆಂಬರ್ 2025, 14:47 IST
Last Updated 23 ಡಿಸೆಂಬರ್ 2025, 14:47 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಕೇಂದ್ರ ಸರ್ಕಾರವು ಹಿರಿಯ ವಕೀಲರಾದ ದೇವಿಂದರ್ ಪಾಲ್ ಸಿಂಗ್ ಮತ್ತು ಕೆ. ರವೀಂದರ್ ಕುಮಾರ್ ಅವರನ್ನು ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕ ಮಾಡಿದೆ.

ಹೆಚ್ಚುವರಿ ಸಾಲಿಸಿಟರ್ ಜನರಲ್ ನೇಮಕಾತಿಗಳನ್ನು ಸಂಪುಟದ ನೇಮಕಾತಿ ಸಮಿತಿಯು ಅನುಮೋದಿಸಿದೆ. ಎರಡೂ ನೇಮಕಾತಿಗಳು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇರುತ್ತದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ದೇವಿಂದರ್ ಪಾಲ್ ಸಿಂಗ್ ಅವರು ಸಾಂವಿಧಾನಿಕ ಕಾನೂನು, ಕ್ರಿಮಿನಲ್, ಸೇವಾ ವಿಷಯಗಳು, ತೆರಿಗೆ ಹಾಗೂ ಬಾಡಿಗೆ ನಿಯಂತ್ರಣ ಕಾಯ್ದೆಯಲ್ಲಿ ಪರಿಣತರಾ­ಗಿ­ದ್ದು, 35 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿದ್ದಾರೆ.

ADVERTISEMENT

ಸಿಂಗ್ ಅವರು ವಾಣಿಜ್ಯ ಕಾನೂನಿನಡಿಯಲ್ಲಿ 20,000ಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಕಾಲತ್ತು ವಹಿಸಿದ್ದಾರೆ. ಜತೆಗೆ, ಹಲವಾರು ಉನ್ನತ ಮಟ್ಟದ ವಿಷಯಗಳಲ್ಲಿ ಕೇಂದ್ರ ಸರ್ಕಾರ, ತನಿಖಾ ಸಂಸ್ಥೆಗಳು, ರಾಜ್ಯ ಸರ್ಕಾರಗಳು, ಸಾರ್ವಜನಿಕ ವಲಯದ ಸಂಸ್ಥೆಗಳು ಪರ ವಾದ ಮಂಡಿಸಿದ್ದಾರೆ.

ಸಿಂಗ್ ಅವರು 2001ರಿಂದ 2005ರವರೆಗೆ ಹರಿಯಾಣ ಮತ್ತು 2005ರಿಂದ 2007ರವರೆಗೆ ಪಂಜಾಬ್‌ನ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ಸೇರಿದಂತೆ ಪಂಜಾಬ್, ಹರಿಯಾಣ ಹೈಕೋರ್ಟ್‌ನಲ್ಲಿ ಸೂಕ್ಷ್ಮವಾದ ಪ್ರಾಸಿಕ್ಯೂಷನ್‌ಗಳು ಮತ್ತು ಸಾಂವಿಧಾನಿಕ ಪ್ರಕರಣಗಳಲ್ಲಿ ವಕಾಲತ್ತು ವಹಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ರವೀಂದ್ರ ಕುಮಾರ್ ಅವರು ಹಿರಿಯ ವಕೀಲರಾಗಿದ್ದು, ತೆಲುಗು ದೇಶಂ ಪಕ್ಷ (ಟಿಡಿಪಿ) ಪಕ್ಷದ ಮಾಜಿ ಸಂಸತ್ ಸದಸ್ಯರೂ ಆಗಿದ್ದಾರೆ. 2018ರ ಏಪ್ರಿಲ್‌ನಿಂದ 2024ರ ಏಪ್ರಿಲ್‌ವರೆಗೆ ರಾಜ್ಯಸಭೆಯಲ್ಲಿ ಆಂಧ್ರಪ್ರದೇಶವನ್ನು ಪ್ರತಿನಿಧಿಸಿದ್ದರು. ಇದಕ್ಕೂ ಮುನ್ನ 2002ರಿಂದ 2004ರವರೆಗೆ ಸುಪ್ರೀಂ ಕೋರ್ಟ್‌ನಲ್ಲಿ ಅಂತರರಾಜ್ಯ ನದಿ ನೀರಿನ ವಿವಾದಗಳಲ್ಲಿ ಆಂಧ್ರಪ್ರದೇಶ ಸರ್ಕಾರದ ಪರ ವಕೀಲರಾಗಿ ಸೇವೆ ಸಲ್ಲಿಸಿದ್ದರು.

ಕುಮಾರ್ ಅವರು ಟಿಡಿಪಿಯ ಕಾನೂನು ವಿಭಾಗದೊಂದಿಗೂ ನಿಕಟ ಸಂಬಂಧ ಹೊಂದಿದ್ದು, 1999ರಿಂದ ಪಕ್ಷದ ಕಾನೂನು ಕೋಶದ ರಾಜ್ಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಅವರ ನೇಮಕಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.