ADVERTISEMENT

ರೈತರ ಹೋರಾಟ ಅಂತ್ಯಗೊಳಿಸುವ ಮಾರ್ಗ ಕಂಡುಕೊಳ್ಳಿ: ಬಿಜೆಪಿಗೆ ಸೇನಾ ತಿರುಗೇಟು

ಏಜೆನ್ಸೀಸ್
Published 4 ಫೆಬ್ರುವರಿ 2021, 7:44 IST
Last Updated 4 ಫೆಬ್ರುವರಿ 2021, 7:44 IST
   

ಮುಂಬೈ: ಅಲಿಗಡ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಶರಜೀಲ್‌ ಉಸ್ಮಾನಿ ವಿಚಾರವಾಗಿ ಬಿಜೆಪಿ ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿರುವ ಶಿವಸೇನಾ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಅಂತ್ಯಗೊಳಿಸುವ ಮಾರ್ಗ ಕಂಡುಕೊಳ್ಳಲಿ ಎಂದು ಹೇಳಿದೆ.

ಶರಜೀಲ್‌ ಉಸ್ಮಾನಿ ಅವರು ಜನವರಿ 30 ರಂದು ಪುಣೆಯಲ್ಲಿ ನಡೆದ ಎಲ್ಗರ್‌ ಪರಿಷತ್‌ ಸಮಾರಂಭದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂತಹ ಮಾತುಗಳನ್ನಾಡಿದ್ದರು. ಹೀಗಾಗಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿತ್ತು. ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ‘ಉಸ್ಮಾನಿಯ ಹೇಳಿಕೆಯು ಹಿಂದೂ ಸಮುದಾಯದ ವಿರುದ್ಧ ಮತ್ತು ಕೋಮು ಸೌಹಾರ್ದತೆಯನ್ನು ಕೆಡಿಸುವ ಉದ್ದೇಶದಿಂದ ಕೂಡಿದೆ’ ಎಂದು ಆರೋಪಿಸಿದ್ದರು.

ಈ ಸಂಬಂಧಶಿವಸೇನಾ ತನ್ನ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ,‘ಒಂದುವೇಳೆ ಶರಜೀಲ್‌ ಅಲಿಗಢದಲ್ಲಿ ಅಥವಾ ನರಕದಲ್ಲಿಯೇ ಅಡಗಿಕೊಂಡಿದ್ದರೂ ಆತನನ್ನು ಹೊರಗೆಳೆಯುವ ಧೈರ್ಯ ಮಹಾರಾಷ್ಟ್ರ ಪೊಲೀಸರಿಗೆ ಇದೆ’ಎಂದು ಸ್ಪಷ್ಟಪಡಿಸಿದೆ.

ADVERTISEMENT

‘ಫಡಣವೀಸ್‌ ಅವರು ಶರಜೀಲ್ ಬಂಧನಕ್ಕೆ ಕರೆ ನೀಡುತ್ತಿದ್ದಾರೆ. ಒಳ್ಳೆಯದನ್ನೇ ಮಾಡಿದ್ದೀರಿ ದೇವೇಂದ್ರ! ನೀವು ಸರ್ಕಾರದ ಮನದ ಮಾತನ್ನೇ ಹೇಳುತ್ತಿದ್ದೀರಿ. ಶರಜೀಲ್‌ ಎಂಬ ಮೇಕೆಯನ್ನು ಹೊರಗೆಳೆದು ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಪ್ರತಿಯೊಬ್ಬರ ಬಯಕೆಯಾಗಿದೆ. ಆದರೆ, ಇಂತಹ ಗೊಂದಲಗಳನ್ನು ಸೃಷ್ಟಿಸುವ ಅಗತ್ಯವಿಲ್ಲ’ ಎಂದು ತಿಳಿಸಿದೆ.

ಮುಂದುವರಿದು,‘ಸಾವಿರಾರು ರೈತರು 90 ದಿನಗಳಿಂದ ದೆಹಲಿ ಗಡಿಯಲ್ಲಿ ರಸ್ತೆ ಮೇಲೆಯೇ ಉಳಿದುಕೊಂಡಿದ್ದಾರೆ. ಎಲ್ಲ ರೈತರೂ ಹಿಂದೂಗಳು. ರೈತರನ್ನು ಅವರ ಮನೆಗಳಿಗೆ ನೀವು ಗೌರವಯುತವಾಗಿ ಯಾವಾಗ ವಾಪಸ್‌ ಕಳುಹಿಸುತ್ತೀರಿ’ ಎಂದು ಪ್ರಶ್ನಿಸಿದೆ.

ಉಸ್ಮಾನಿಯನ್ನುತರಾಟೆಗೆ ತೆಗೆದುಕೊಂಡಿರುವ ಸೇನಾ, ‘ಶರಜೀಲ್‌ ಅವರಂತಹವರು ಹಿಂದುತ್ವವನ್ನು ಗೇಲಿಮಾಡುವಂತಿಲ್ಲ. ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಹಿಂದುತ್ವದ ಮೇಲಿನ ಯಾವುದೇ ದಾಳಿಯನ್ನೂ ಸಹಿಸುವುದಿಲ್ಲ’ ಎಂದು ಎಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.