ನವದೆಹಲಿ: ಮಧ್ಯಸ್ಥಿಕೆ ಮಂಡಳಿ ಸ್ಥಾಪನೆ ಪ್ರಕ್ರಿಯೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದ್ದು, ಶೀಘ್ರದಲ್ಲೇ ‘ಒಳ್ಳೆಯ ಸುದ್ದಿ’ ಹಂಚಿಕೊಳ್ಳುವುದಾಗಿ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಭಾನುವಾರ ಹೇಳಿದ್ದಾರೆ.
ಮಧ್ಯಸ್ಥಿಕೆ ಕುರಿತ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ‘ಮಧ್ಯಸ್ಥಿಕೆ ಕಾಯ್ದೆ ಜಾರಿಗೆ ಬಂದು ವರ್ಷ ಕಳೆದರೂ ಅಖಿಲ ಭಾರತ ಮಟ್ಟದಲ್ಲಿ ಮಧ್ಯಸ್ಥಿಕೆ ಮಂಡಳಿಯನ್ನು ಸ್ಥಾಪಿಸಲಾಗಿಲ್ಲ ಎಂಬ ಬಗ್ಗೆ ಕೆಲವರು ಗಮನಸೆಳೆದಿದ್ದಾರೆ’ ಎಂದರು.
‘ನಾವು ಆ ದಿಕ್ಕಿನಲ್ಲಿ (ಮಧ್ಯಸ್ಥಿಕೆ ಮಂಡಳಿ ಸ್ಥಾಪನೆ) ವೇಗವಾಗಿ ಸಾಗುತ್ತಿದ್ದೇವೆ. ಶೀಘ್ರದಲ್ಲೇ ಶುಭ ಸುದ್ದಿ ನೀಡಲಿದ್ದೇವೆ’ ಎಂದು ಹೇಳಿದರು.
ಮಧ್ಯಸ್ಥಿಕೆ ಕಾಯ್ದೆ ಸಂಸತ್ತಿನಲ್ಲಿ ಅಂಗೀಕಾರಗೊಂಡು ಎರಡು ವರ್ಷ ಕಳೆದರೂ ಮಧ್ಯಸ್ಥಿಕೆ ಮಂಡಳಿ ಸ್ಥಾಪನೆ ವಿಳಂಬವಾಗಿರುವುದಕ್ಕೆ ಮಾನವ ಸಂಪನ್ಮೂಲ ಕೊರತೆಯೇ ಕಾರಣ ಎಂದು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಈಚೆಗೆ ಹೇಳಿದ್ದರು.
ಮಧ್ಯಸ್ಥಿಕೆದಾರರನ್ನು ನಿಯಂತ್ರಿಸಲು ಮಧ್ಯಸ್ಥಿಕೆ ಮಂಡಳಿಯನ್ನು ಸ್ಥಾಪಿಸಲಾಗುವುದು ಎಂದು ಕಾಯ್ದೆ ಹೇಳುತ್ತದೆ. ಮಧ್ಯಸ್ಥಿಕೆದಾರರ ನೋಂದಣಿ, ಮಧ್ಯಸ್ಥಿಕೆ ಸೇವೆ ಒದಗಿಸುವವರಿಗೆ ಮಾನ್ಯತೆ ನೀಡುವ ಕೆಲಸವನ್ನು ಈ ಮಂಡಳಿ ಮಾಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.