ADVERTISEMENT

ಕೋವಿಡ್ ಲಸಿಕೆ ವ್ಯರ್ಥ: ಜಾರ್ಖಂಡ್‌ನಲ್ಲಿ ಶೇ 37, ಛತ್ತೀಸ್‌ಗಢದಲ್ಲಿ ಶೇ 30

ಪಿಟಿಐ
Published 26 ಮೇ 2021, 7:20 IST
Last Updated 26 ಮೇ 2021, 7:20 IST
ಕೋವಿಡ್‌ ಲಸಿಕೆ ಹಾಕುತ್ತಿರುವುದು–ಸಾಂದರ್ಭಿಕ ಚಿತ್ರ
ಕೋವಿಡ್‌ ಲಸಿಕೆ ಹಾಕುತ್ತಿರುವುದು–ಸಾಂದರ್ಭಿಕ ಚಿತ್ರ   

ನವದೆಹಲಿ: ಲಭ್ಯವಿರುವಷ್ಟು ಲಸಿಕೆ ಸಂಗ್ರಹ ಬಳಸಿಕೊಂಡು, ಅರ್ಹರಿಗೆ ಲಸಿಕೆ ಹಾಕುವ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿ ಪ್ರದೇಶಗಳಿಗೆ ಸಲಹೆ ಮಾಡಿದೆ. ಅಲ್ಲದೆ ಲಸಿಕೆ ಪೋಲು ಪ್ರಮಾಣವನ್ನು ಶೇ 1ಕ್ಕಿಂತ ಕಡಿಮೆ ಮಾಡುವಂತೆ ಸೂಚಿಸಿದೆ.

ಲಸಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವಾಲಯವು ಮಂಗಳವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಪರಿಶೀಲನೆ ಸಭೆ ನಡೆಸಿದೆ. 'ಕೋವಿನ್‌' ವ್ಯವಸ್ಥೆಯನ್ನು ಬಳಸಿಕೊಂಡು ಸಂಗ್ರಹ ಇರುವಷ್ಟು ಲಸಿಕೆಯ ಮೂಲಕ ಲಸಿಕೆ ಅಭಿಯಾನ ಪ್ರಮಾಣವನ್ನು ಹೆಚ್ಚಿಸುವಂತೆ ಸಲಹೆ ನೀಡಿದೆ. ಖಾಸಗಿ ಆಸ್ಪತ್ರೆಗಳು ನೇರವಾಗಿ ಲಸಿಕೆ ನೋಂದಣಿ ಮಾಡಬಾರದು, ಆನ್‌ಲೈನ್‌ ಮೂಲಕವೇ ನೋಂದಣಿ ನಡೆಯಬೇಕು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

'ಲಸಿಕೆ ಪೋಲು ಪ್ರಮಾಣವು ಶೇ 1ಕ್ಕಿಂತಲೂ ಕಡಿಮೆ ಇರುವಂತೆ ನಿರ್ವಹಿಸಲು ಪದೇ ಪದೇ ರಾಜ್ಯಗಳಿಗೆ ತಿಳಿಸಲಾಗಿದೆ. ಜಾರ್ಖಂಡ್‌ನಲ್ಲಿ ಲಸಿಕೆ ಪೋಲು ಪ್ರಮಾಣ ಶೇ 37.3ರಷ್ಟಿದೆ. ಛತ್ತೀಸ್‌ಗಢದಲ್ಲಿ ಶೇ 30.2, ತಮಿಳುನಾಡು ಶೇ 15.5, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ 10.8, ಮಧ್ಯ ಪ್ರದೇಶದಲ್ಲಿ ಶೇ 10.7ರಷ್ಟು ಲಸಿಕೆ ವ್ಯರ್ಥವಾಗುತ್ತಿದೆ. ದೇಶದ ಒಟ್ಟಾರೆ ಸರಾಸರಿ ಲಸಿಕೆ ಪೋಲು ಪ್ರಮಾಣಕ್ಕಿಂತಲೂ (ಶೇ 6.3) ರಾಜ್ಯಗಳ ಪೋಲು ಪ್ರಮಾಣ ಹೆಚ್ಚಿದೆ' ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಭಾರತ ಸರ್ಕಾರದಿಂದ ಉಚಿತ ಲಸಿಕೆಗಳ ಪೂರೈಕೆಯು ಜೂನ್‌ 15ಕ್ಕೆ ಹಾಗೂ ನೇರವಾಗಿ ರಾಜ್ಯಗಳಿಗೆ ಜೂನ್‌ 30ರ ವರೆಗೂ ಲಸಿಕೆ ಪೂರೈಕೆಯಾಗುವ ನಿರೀಕ್ಷೆ ಇರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ. ನಿಗದಿತ ಸಮಯಕ್ಕೆ ಲಸಿಕೆ ಪೂರೈಕೆಯಾಗುವುದನ್ನು ನಿರ್ವಹಿಸಲು ಲಸಿಕೆ ತಯಾರಿಕ ಕಂಪನಿಗಳೊಂದಿಗೆ ಸಮನ್ವಯ ಸಾಧಿಸಲು ಇಬ್ಬರು ಅಥವಾ ಮೂವರು ಸದಸ್ಯರ ತಂಡ ರೂಪಿಸಲು ಸಲಹೆ ಮಾಡಲಾಗಿದೆ.

ಕೋವಿಡ್‌ ಸಾಫ್ಟ್‌ವೇರ್‌ನಲ್ಲಿ ಬದಲಾವಣೆಗಳನ್ನು ತರಲಾಗಿದ್ದು, ಪರಿಣಾಮಕಾರಿಯಾಗಿ ಲಸಿಕೆ ನಿರ್ವಹಣೆ ಸಾಧ್ಯವಾಗಲಿದೆ. ಜಿಲ್ಲಾವಾರು ಮತ್ತು ಕೋವಿಡ್‌ ಲಸಿಕೆ ಕೇಂದ್ರವಾರು ಯೋಜನೆ ರೂಪಿಸಿ ಲಸಿಕೆ ಹಾಕುವ ಪ್ರಕ್ರಿಯೆ ಚುರುಕುಗೊಳಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ಗ್ರಾಮೀಣ ಭಾಗಗಳು, ಬುಡಕಟ್ಟು ಸಮುದಾಯಗಳು ಅಥವಾ ಸಂಪರ್ಕದಿಂದ ದೂರ ಉಳಿದಿರುವ ಪ್ರದೇಶಗಳಲ್ಲಿ ಜನರಿಗೆ ಲಸಿಕೆ ಹಾಕಲು ಸೂಕ್ತ ಕಾರ್ಯರೂಪ ರಚಿಸುವಂತೆ ತಿಳಿಸಲಾಗಿದೆ.

ರಷ್ಯಾದ ಸ್ಪುಟ್ನಿಕ್‌ ಲಸಿಕೆ ಲಭ್ಯತೆಯನ್ನೂ ಕೋವಿನ್‌ ಪೋರ್ಟಲ್‌ನಲ್ಲಿ ಸೇರಿಸಲಾಗಿದೆ ಎಂದು ತಿಳಿಸಿದೆ.

ಲಸಿಕೆ ಲಭ್ಯತೆಯ ಪಟ್ಟಿ ಪ್ರಕಟಿಸಲು ರಾಜ್ಯಗಳು ನಿತ್ಯ ನಿರ್ದಿಷ್ಟ ಸಮಯವನ್ನು ನಿಗದಿ ಪಡಿಸಿಕೊಳ್ಳಬೇಕು (ಉದಾ: ಬೆಳಿಗ್ಗೆ 8ರಿಂದ 9, ರಾತ್ರಿ 9ರಿಂದ 10,..). ಇದರಿಂದ ನಾಗರಿಕರಿಗೆ ಲಸಿಕೆ ಲಭ್ಯತೆ ಮತ್ತು ಲಸಿಕೆ ಹಾಕಿಸಿಕೊಳ್ಳಲು ದಿನ ಮತ್ತು ಸಮಯ ಕಾಯ್ದಿರಿಸಲು ಅನುವಾಗಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.