ADVERTISEMENT

ಕೈಗಾರಿಕಾ ಮದ್ಯ: ಹಕ್ಕು ಪ್ರತಿಪಾದಿಸಿದ ಕೇಂದ್ರ

ಪಿಟಿಐ
Published 4 ಏಪ್ರಿಲ್ 2024, 15:43 IST
Last Updated 4 ಏಪ್ರಿಲ್ 2024, 15:43 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ನವದೆಹಲಿ: ಕೈಗಾರಿಕಾ ಉದ್ದೇಶಕ್ಕೆ ಬಳಕೆಯಾಗುವ ಮದ್ಯದ ಮೇಲೆ ಅಬಕಾರಿ ಸುಂಕ ವಿಧಿಸುವುದಕ್ಕೆ ಸಂಬಂಧಿಸಿದ ಅಧಿಕಾರವು ಸಂಸತ್ತಿಗೆ ಮಾತ್ರವೇ ಇದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೇಳಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ಒಂಬತ್ತು ಮಂದಿ ನ್ಯಾಯಮೂರ್ತಿಗಳ ಸಂವಿಧಾನ ಪೀಠದ ಎದುರು ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು, ‘ಮನುಷ್ಯ ಸೇವಿಸಲು ಅರ್ಹವಾಗಿರುವ ಮದ್ಯ ಹಾಗೂ ಸೇವನೆಗೆ ಅರ್ಹವಾಗಿಲ್ಲದ ಮದ್ಯವನ್ನು ಭಿನ್ನವಾಗಿ ಕಾಣುವ ತೀರ್ಮಾನವನ್ನು ಪ್ರಜ್ಞಾಪೂರ್ವಕವಾಗಿಯೇ ತೆಗೆದುಕೊಳ್ಳಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಸೇವನೆಗೆ ಅರ್ಹವಲ್ಲದ ಮದ್ಯದ ಮೇಲೆ ಅಬಕಾರಿ ಸುಂಕ ವಿಧಿಸುವ ವಿಚಾರವಾಗಿ ಕಾನೂನು ರೂಪಿಸುವ ಅಧಿಕಾರವು ಸಂಸತ್ತಿಗೆ ಮಾತ್ರವೇ ಇದೆ. ಸೇವನೆಗೆ ಅರ್ಹವಾದ ಮದ್ಯದ ಮೇಲೆ ಅಬಕಾರಿ ಸುಂಕ ವಿಧಿಸುವ ವಿಚಾರವಾಗಿ ಕಾನೂನು ರೂಪಿಸುವ ಅಧಿಕಾರವು ವಿಧಾನಸಭೆಗಳಿಗೆ ಇದೆ’ ಎಂದು ವೆಂಕಟರಮಣಿ ಅವರು ವಿವರಿಸಿದರು.

ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಅಭಯ್ ಎಸ್. ಓಕ, ಬಿ.ವಿ. ನಾಗರತ್ನ, ಜೆ.ಬಿ. ಪಾರ್ದೀವಾಲಾ, ಮನೋಜ್ ಮಿಶ್ರಾ, ಉಜ್ವಲ್ ಭುಇಯಾಂ, ಸತೀಶ್ ಚಂದ್ರ ಶರ್ಮ ಮತ್ತು ಆಗಸ್ಟೀನ್ ಜಾರ್ಜ್‌ ಮಸೀಹ್ ಅವರೂ ಇದ್ದಾರೆ.

ಕೈಗಾರಿಕಾ ಬಳಕೆಯ ಮದ್ಯದ ಉತ್ಪಾದನೆ, ಪೂರೈಕೆ ಹಾಗೂ ಅದಕ್ಕೆ ಸಂಬಂಧಿಸಿದ ಕಾನೂನುಗಳ ವಿಚಾರದಲ್ಲಿ ರಾಜ್ಯ, ಕೇಂದ್ರ ಸರ್ಕಾರಗಳ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಪೀಠವು ವಿಚಾರಣೆ ನಡೆಸುತ್ತಿದೆ.

ಕೈಗಾರಿಕಾ ಮದ್ಯದ ಉತ್ಪಾದನೆಯ ವಿಚಾರದಲ್ಲಿ ಶಾಸನ ರೂಪಿಸುವ ಅಧಿಕಾರವು ಕೇಂದ್ರಕ್ಕೆ ಇದೆ ಎಂದು ಏಳು ಮಂದಿ ನ್ಯಾಯಮೂರ್ತಿಗಳು ಇರುವ ಸಂವಿಧಾನ ಪೀಠವು 1997ರಲ್ಲಿ ತೀರ್ಪು ನೀಡಿತ್ತು. ಈ ವಿಷಯವನ್ನು 2010ರಲ್ಲಿ ಒಂಬತ್ತು ಮಂದಿ ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ.

ಬುಧವಾರ ನಡೆದ ವಿಚಾರಣೆ ಸಂದರ್ಭದಲ್ಲಿ ಉತ್ತರ ಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರ ಹಾಗೂ ಪಶ್ಚಿಮ ಬಂಗಾಳದ ಟಿಎಂಸಿ ನೇತೃತ್ವದ ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದರು. ಎರಡೂ ಕಡೆಯ ವಕೀಲರು, ಕೈಗಾರಿಕಾ ಬಳಕೆಯ ಮದ್ಯದ ವಿಚಾರವಾಗಿ ರಾಜ್ಯಗಳು ಶಾಸನ ರೂಪಿಸುವ ಅಧಿಕಾತ ಹೊಂದಿವೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.