ಅರವಿಂದ ಕೇಜ್ರಿವಾಲ್
ಪಿಟಿಐ ಚಿತ್ರ
ನವದೆಹಲಿ: ‘ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ‘ಕೊಲೆ’ಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ದೆಹಲಿ ಪೊಲೀಸರಿಂದ ಸಂಚು ನಡೆದಿದೆ’ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ.
‘ಕೊಲೆಗೆ ಸಂಚು ಹಿನ್ನಲೆಯಲ್ಲಿ ಈ ಹಿಂದೆ ಇದ್ದಂತೆ ಕೇಜ್ರಿವಾಲ್ ಅವರಿಗೆ ಪಂಜಾಬ್ ಪೊಲೀಸರಿಂದಲೇ ಭದ್ರತೆ ಒದಗಿಸಲು ಸೂಚಿಸಬೇಕು’ ಎಂದು ಚುನಾವಣಾ ಆಯೋಗಕ್ಕೆ ಎಎಪಿ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಆತಿಶಿ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಈ ಕುರಿತು ನೇರ ಆರೋಪ ಮಾಡಿದರು.
‘ಫೆ.5ರ ಚುನಾವಣೆಯಲ್ಲಿ ಎಎಪಿಗೂ ನ್ಯಾಯಯುತ ಅವಕಾಶ ಇರುವಂತೆ ಕ್ರಮವಹಿಸಬೇಕು. ಕೇಜ್ರಿವಾಲ್ ಅವರಿಗಿರುವ ಜೀವಬೆದರಿಕೆ ಕುರಿತು ಪರಿಶೀಲಿಸಬೇಕು ಎಂದು ಕೋರಲಾಗಿದೆ‘ ಎಂದರು.
‘ಶಾ ನಿಯಂತ್ರಣದಲ್ಲಿರುವ ದೆಹಲಿ ಪೊಲೀಸರ ಮೇಲೆ ನಮಗೆ ವಿಶ್ವಾಸವಿಲ್ಲ. ಹೀಗಾಗಿ, ಹಿಂದೆ ಇದ್ದಂತೆ ಪಂಜಾಬ್ ಪೊಲೀಸರಿಂದಲೇ ಭದ್ರತೆ ಒದಗಿಸಲು ಕೋರಿದ್ದೇವೆ. ದೆಹಲಿ ಪೊಲೀಸ್ ಇಲಾಖೆ ಸದ್ಯ ಕೇಂದ್ರ ಸರ್ಕಾರದ ಸುಪರ್ದಿಯಲ್ಲಿದೆ. ಕೊಲೆ ಸಂಚು ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆಯಂತೆ ಮೂಕಪ್ರೇಕ್ಷಕವಾಗಿದೆ‘ ಎಂದು ಟೀಕಿಸಿದರು.
’ಕೊಲೆ ಸಂಚಿನಲ್ಲಿ ಬಿಜೆಪಿ ಮತ್ತು ದೆಹಲಿ ಪೊಲೀಸ್ ಇಬ್ಬರ ಪಾತ್ರವೂ ಇದೆ. ಒಂದರ ನಂತರ ಮತ್ತೊಂದರಂತೆ ಕೇಜ್ರಿವಾಲ್ ವಿರುದ್ಧ ಹಲ್ಲೆ ಯತ್ನಗಳು ನಡೆದಿವೆ. ಕಳೆದ ವರ್ಷ ಅಕ್ಟೋಬರ್‌ನಲ್ಲೂ ಯತ್ನ ನಡೆದಿತ್ತು. ಸರ್ಕಾರ ತನಿಖೆ ನಡೆಸಿದಾಗ ದಾಳಿಯಲ್ಲಿ ಬಿಜೆಪಿ ಕಾರ್ಯಕರ್ತರ ಪಾತ್ರ ಇರುವುದು ತಿಳಿಯಿತು. ಆದರೆ, ಪೊಲೀಸರು ಕ್ರಮ ಕೈಗೊಂಡಿಲ್ಲ‘ ಎಂದು ಆತಿಶಿ ದೂರಿದರು.
ಫೆ. 5ರ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜಧಾನಿಯಲ್ಲಿ ಕೆಟ್ಟ ರಾಜಕಾರಣ ನಡೆಯುತ್ತಿದೆ. ಕೇಜ್ರಿವಾಲ್ ಅವರಿಗಿರುವ ಭದ್ರತೆ ಹಿಂಪಡೆಯಲು ಬಿಜೆಪಿ ಸಂಚು ನಡೆಸುತ್ತಿದೆ ಎಂದು ಟೀಕಿಸಿದರು.
ಮೋದಿ ಮತ್ತು ಕೇಜ್ರಿವಾಲ್ ಅಣ್ಣತಮ್ಮದಿರಂತೆ. ಒಂದೇ ನಾಣ್ಯದ ಎರಡು ಮುಖಗಳು. ಇಬ್ಬರೂ ಆರ್‌ಎಎಸ್ ಸಿದ್ಧಾಂತದ ಹಿನ್ನಲೆಯಿಂದ ಬಂದವರೆ ಆಗಿದ್ದಾರೆ.ಅಸಾದುದ್ದೀನ್ ಒವೈಸಿ ಎಐಎಂಐಎಂ ಅಧ್ಯಕ್ಷ
ನನಗೆ ನೀಡಿದ್ದ ಪಂಜಾಬ್ ಪೊಲೀಸರ ಭದ್ರತೆ ಹಿಂಪಡೆದ ಹಿಂದಿರುವುದು ಶುದ್ಧ ರಾಜಕಾರಣ. ಕನಿಷ್ಠ ವೈಯಕ್ತಿಕ ಭದ್ರತೆ ಮತ್ತು ಸುರಕ್ಷತೆ ವಿಷಯದಲ್ಲಿಯಾದರೂ ರಾಜಕಾರಣ ಇರಬಾರದುಅರವಿಂದ ಕೇಜ್ರಿವಾಲ್ ಎಎಪಿ ಸಂಚಾಲಕ
ಚುನಾವಣಾ ಆಯೋಗ ಮತ್ತು ದೆಹಲಿ ಪೊಲೀಸರ ಸೂಚನೆಯಂತೆ ಕೇಜ್ರಿವಾಲ್ ಅವರ ಭದ್ರತೆ ನಿಯೋಜಿಸಿದ್ದ ಪಂಜಾಬ್ ಪೊಲೀಸರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಗಿದೆ.ಗೌರವ್ ಯಾದವ್ ಪೊಲೀಸ್ ಮಹಾನಿರ್ದೇಶಕ ಪಂಜಾಬ್
3 ಪಕ್ಷಗಳಲ್ಲಿ ದಲಿತರ ಮತ ಹಂಚಿಕೆ?
ನವದೆಹಲಿ: ದೆಹಲಿ ಚುನಾವಣೆಯಲ್ಲಿ ಪರಿಶಿಷ್ಟರ ಮತಗಳು ಬಿಜೆಪಿ ಎಎಪಿ ಮತ್ತು ಕಾಂಗ್ರೆಸ್ ಮೂರೂ ಪಕ್ಷಗಳಲ್ಲಿ ಹಂಚಿಕೆ ಆಗಬಹುದು ಎಂದು ಪರಿಣತರು ವಿಶ್ಲೇಷಿಸಿದ್ದಾರೆ.
ದೆಹಲಿಯಲ್ಲಿ ಎಎಪಿ ಸತತ 3ನೇ ಅವಧಿಗೆ ಅಧಿಕಾರಕ್ಕೆ ಮರಳಲು ಯತ್ನಿಸುತ್ತಿದ್ದರೆ ಬಿಜೆಪಿ ಮತ್ತು ಕಾಂಗ್ರೆಸ್ ತೀವ್ರ ಸ್ಪರ್ಧೆ ಒಡ್ಡಿವೆ. ಮೂರೂ ಪಕ್ಷಗಳು ಪರಿಶಿಷ್ಟರ ಮತ ಸೆಳೆಯಲು ಒತ್ತು ನೀಡಿವೆ. ಬಿಜೆಪಿ ಹಲವು ಹೊಸ ಕಾರ್ಯಕ್ರಮಗಳನ್ನು ಘೋಷಿಸಿದೆ. ಆದರೆ ಡಾ.ಅಂಬೇಡ್ಕರ್ ಅವರನ್ನು ಅಮಿತ್ ಶಾ ಅಪಮಾನಿಸಿದ್ದಾರೆ ಎಂಬುದು ಚರ್ಚೆಯಲ್ಲಿರುವಂತೆ ಎಎಪಿಕಾಂಗ್ರೆಸ್ ಒತ್ತು ನೀಡುತ್ತಿದೆ.
‘ಪರಿಶಿಷ್ಟರು ಕನಿಷ್ಟ 35 ಕ್ಷೇತ್ರಗಳಲ್ಲಿ ಫಲಿತಾಂಶ ನಿರ್ಧರಿಸುವ ಗಣನೀಯ ಸಂಖ್ಯೆಯಲ್ಲಿ ಇದ್ದಾರೆ. ಎಎಪಿ ಕೆಲ ಕ್ಷೇತ್ರಗಳಲ್ಲಿ ಈ ವರ್ಗದ ಬೆಂಬಲ ಕಳೆದುಕೊಳ್ಳುವ ಸಾಧ್ಯತೆ ತಳ್ಳಿಹಾಕಲಾಗದು’ ಎನ್ನುತ್ತಾರೆ ಸ್ವತಂತ್ರ ರಾಜಕಿಯ ವಿಶ್ಲೇಷಣಾ ಸಂಸ್ಥೆ ಸುಬಲ್‌ಟರ್ಮ್ ಮೀಡಿಯಾ ಫೌಂಡೇಷನ್‌ನ ನಿರ್ದೇಶಕ ಕುಶ್ ಅಂಬೇಡ್ಕರ್‌ವಾದಿ ಹೇಳುತ್ತಾರೆ.
ದಲಿತರ ಮತಗಳು ಹೆಚ್ಚಿವೆ ಎಂಬ ಕಾರಣದಿಂದಲೇ ಎಎಪಿ ಸಂಚಾಲಕ ಕೇಜ್ರಿವಾಲ್ ಕಚೇರಿಯಲ್ಲಿ ಡಾ.ಅಂಬೇಡ್ಕರ್ ಚಿತ್ರ ಇದೆ. ಕಳೆದ ಎರಡು ಚುನಾವಣೆಗಳಲ್ಲಿ ಎಎಪಿ ಬೆಂಬಲಿಸಿದ್ದ ಪರಿಶಿಷ್ಟರ ಸಮೂಹ ಈ ಬಾರಿ ಭಾಗಶಃ ಹಿಂದೆ ಸರಿಯಬಹುದು ಎನ್ನಲಾಗಿದೆ. ಪ್ರಬಲ ಜಾತಿಗಳು ಬಹುತೇಕ ಬಿಜೆಪಿ ಬೆಂಬಲಿಸಬಹುದು. ಒಬಿಸಿಯಲ್ಲೂ ಕೆಲ ಜಾತಿಗಳು ಬಿಜೆಪಿ ಜೊತೆಗೆ ಹೋಗಬಹುದು. ಇದೇ ಕಾರಣದಿಂದ ದಲಿತರ ಮತಗಳತ್ತ ಎಲ್ಲ ಪಕ್ಷಗಳು ಗಮನಹರಿಸಿವೆ. ಉಳಿದಂತೆ ಬಿಎಸ್‌ಪಿ ಅಜಾದ್ ಸಮಾಜ್ ಪಾರ್ಟಿ ಈ ಮತಗಳಮೇಲೆ ಪ್ರಭಾವ ಬೀರುವ ಸಾಧ್ಯತೆಗಳು ಕಡಿಮೆ ಎಂದು ಖುಶ್ ಅಭಿಪ್ರಾಯಪಟ್ಟರು.
ಆದರೆ ದಲಿತ ಮತ್ತು ಆದಿವಾದಿ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟ ಇತ್ತೀಚೆಗೆ ನಡೆಸಿದ್ದ ಸಮೀಕ್ಷೆಯ ಪ್ರಕಾರ ದಲಿತ ಸಮುದಾಯದಲ್ಲಿ ಈಗಲೂ ಎಎಪಿ ಜನಪ್ರಿಯತೆ ಹೊಂದಿದೆ. ಜ. 1 ಮತ್ತು 15ರ ನಡುವೆ ಸಮೀಕ್ಷೆ ನಡೆದಿದ್ದು 6256 ಮಂದಿ ಸಮೀಕ್ಷೆಗೆ ಪ್ರತಿಕ್ರಿಯಿಸಿದ್ದರು. ಇವರಲ್ಲಿ ಶೇ 44ರಷ್ಟು ಮಂದಿ ಎಎಪಿ ಪರ ಒಲವು ತೋರಿದ್ದರೆ ಶೇ 32ರಷ್ಟು ಮಂದಿ ಬಿಜೆಪಿ ಶೇ 21ರಂದು ಮಂದಿ ಕಾಂಗ್ರೆಸ್ ಪರವಾಗಿ ಒಲವು ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.