ADVERTISEMENT

‘ಲಸಿಕೆ ನಿಷ್ಪ್ರಯೋಜಕ ಎಂಬುದಕ್ಕೆ ಸಾಕ್ಷ್ಯವಿಲ್ಲ’–ಕೇಂದ್ರ ಆರೋಗ್ಯ ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 20:15 IST
Last Updated 3 ಡಿಸೆಂಬರ್ 2021, 20:15 IST
ಹೊರರಾಜ್ಯಗಳ ಪ್ರಯಾಣಿಕರಿಗೆ ಆರ್‌ಟಿ–ಪಿಸಿಆರ್‌ ಪರೀಕ್ಷೆ
ಹೊರರಾಜ್ಯಗಳ ಪ್ರಯಾಣಿಕರಿಗೆ ಆರ್‌ಟಿ–ಪಿಸಿಆರ್‌ ಪರೀಕ್ಷೆ   

ನವದೆಹಲಿ: ‘ಕೋವಿಡ್‌ ತಡೆಗಟ್ಟಲುಈಗ ನೀಡಲಾಗುತ್ತಿರುವ ಲಸಿಕೆಗಳು ಓಮೈಕ್ರಾನ್ ರೂಪಾಂತರ ತಳಿಯ ವಿರುದ್ಧ ಕೆಲಸ ಮಾಡುವುದಿಲ್ಲ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ’ ಎಂದುಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ. ಅದರ ಜತೆಯಲ್ಲಿಯೇ, ‘ಆದರೆ ಓಮೈಕ್ರಾನ್‌ನ ಕೆಲವು ಸ್ಪೈಕ್‌ ಜಿನೋಮ್‌ಗಳು, ಈ ಲಸಿಕೆಗಳ ಪರಿಣಾಮವನ್ನು ಕಡಿಮೆ ಮಾಡುತ್ತವೆ ಎಂದು ಹೇಳಲಾಗುತ್ತಿದೆ’ ಎಂದೂ ಸಚಿವಾಲಯವು ಹೇಳಿದೆ.

ಓಮೈಕ್ರಾನ್‌ ರೂಪಾಂತರ ತಳಿಗೆ ಸಂಬಂಧಿಸಿದಂತೆ ಸಚಿವಾಲಯವು ಶುಕ್ರವಾರ ಬಿಡುಗಡೆ ಮಾಡಿರುವ ಪ್ರಶ್ನೋತ್ತರದಲ್ಲಿ ಈ ಮಾಹಿತಿ ಇದೆ.‘ಓಮೈಕ್ರಾನ್‌ನಿಂದ ಕೋವಿಡ್ ಹರಡುವಿಕೆಯ ವೇಗ ಹೆಚ್ಚುತ್ತದೆ ಮತ್ತು ಅದು ಕೋವಿಡ್ ಪ್ರತಿರೋಧವನ್ನು ತಪ್ಪಿಸಿ, ಮನುಷ್ಯನ ದೇಹವನ್ನು ಸೇರುತ್ತದೆ ಎಂಬುದನ್ನು ದೃಢವಾಗಿ ಹೇಳಬಲ್ಲ ಯಾವುದೇ ಸಾಕ್ಷ್ಯ ಈಗ ಇಲ್ಲ. ಆದರೆ, ಇದನ್ನು ದೃಢಪಡಿಸುವ ವರದಿಗಳಿಗಾಗಿ ಕಾಯುತ್ತಿದ್ದೇವೆ’ ಎಂದು ಪ್ರಶ್ನೋತ್ತರದಲ್ಲಿ ವಿವರಿಸಲಾಗಿದೆ.

‘ದಕ್ಷಿಣ ಆಫ್ರಿಕಾ ಅಲ್ಲದೆ, ವಿಶ್ವದ ಹಲವು ದೇಶಗಳಲ್ಲಿ ಓಮೈಕ್ರಾನ್‌ ಕೋವಿಡ್‌ ಪ್ರಕರಣಗಳು ಪತ್ತೆಯಾಗುತ್ತಿವೆ. ಅದರ ಹರಡುವಿಕೆಯ ಸ್ವರೂಪವನ್ನು ಗಮನಿಸಿದರೆ ಭಾರತವೂ ಸೇರಿದಂತೆ ವಿಶ್ವದ ಹಲವು ದೇಶಗಳಿಗೆ ಓಮೈಕ್ರಾನ್‌ ವ್ಯಾಪಕವಾಗಿ ಹರಡುವ ಸಾಧ್ಯತೆ ಇದೆ. ಆದರೆ ಇದು ಯಾವ ಮಟ್ಟದಲ್ಲಿ ಹರಡಬಹುದು ಮತ್ತು ಓಮೈಕ್ರಾನ್‌ನಿಂದ ಉಂಟಾಗುವ ಕೋವಿಡ್‌ನ ತೀವ್ರತೆ ಎಷ್ಟಿರುತ್ತದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ’ ಎಂದು ಸಚಿವಾಲಯವು ಹೇಳಿದೆ.

ADVERTISEMENT

‘ದೇಶದಲ್ಲಿ ಸಾಕಷ್ಟು ಮಂದಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಜತೆಗೆ ಎರಡನೇ ಅಲೆಯ ವೇಳೆ ದೇಶದ ಬಹಳಷ್ಟು ಮಂದಿ ಸೋಂಕಿನ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಸೆರೋಸಮೀಕ್ಷೆಗಳು ಹೇಳಿವೆ. ಲಸಿಕೆ ಮತ್ತು ಸೋಂಕಿನ ಸಂಪರ್ಕದಿಂದ ಉಂಟಾಗಿರುವ ಪ್ರತಿಕಾಯ ಇರುವ ಕಾರಣ, ದೇಶದಲ್ಲಿ ಕೋವಿಡ್‌ನ ಮೂರನೇ ಅಲೆ ಬಂದರೂ ಅದರ ತೀವ್ರತೆ ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದೆ’ ಎಂದು ಸಚಿವಾಲಯವು ಹೇಳಿದೆ.

ರಕ್ಷಣೆ ಇದ್ದೇ ಇರುತ್ತದೆ

‘ಕೋವಿಡ್‌ನಿಂದ ಉಂಟಾದ ಪ್ರತಿಕಾಯ ಮತ್ತು ಲಸಿಕೆಯಿಂದ ಉಂಟಾದ ಪ್ರತಿಕಾಯ ಇದ್ದೇ ಇರುತ್ತದೆ. ಲಸಿಕೆಯ ಪರಿಣಾಮವನ್ನು ಈ ರೂಪಾಂತರ ತಳಿಯು ಕಡಿಮೆ ಮಾಡಿದರೂ, ಕೋವಿಡ್‌ನಿಂದ ರಕ್ಷಣೆ ಇದ್ದೇ ಇರುತ್ತದೆ’ ಎಂದು ಸಚಿವಾಲಯವು ಹೇಳಿದೆ.

‘ವಿಶ್ಲೇಷಣೆ ಅನಿವಾರ್ಯ’

‘ಆರ್‌ಟಿ–ಪಿಸಿಆರ್‌ ಪರೀಕ್ಷೆಯಲ್ಲಿ ಓಮೈಕ್ರಾನ್‌ ಪತ್ತೆಯಾಗದೇ ಇರುವ ಸಾಧ್ಯತೆ ಇದೆ. ಹೀಗಾಗಿ ಶಂಕಿತ ಪ್ರಕರಣಗಳ ಮಾದರಿಯನ್ನು ವೈರಾಣು ಸಂರಚನೆ ವಿಶ್ಲೇಷಣೆಗೆ (ಜಿನೋಮ್ ಸೀಕ್ವೆನ್ಸಿಂಗ್) ಒಳಪಡಿಸಿ, ದೃಢಪಡಿಸಿಕೊಳ್ಳಬೇಕು’ ಎಂದು ಸಚಿವಾಲಯವು ಹೇಳಿದೆ.

‘ಗಡಿಬಂದ್ ಉಪಯೋಗವಿಲ್ಲ’

‘ದೇಶಗಳು ಗಡಿಗಳನ್ನು ಬಂದ್ ಮಾಡುವುದ ರಿಂದ ಓಮೈಕ್ರಾನ್‌ ಬರುವುದನ್ನು ಕೆಲಕಾಲ ತಡೆಯ ಬಹುದು ಅಷ್ಟೆ. ಆದರೆ ಅದನ್ನು ನಿಯಂತ್ರಿಸುವ ಕೆಲಸ ಮಾಡಲೇಬೇಕು. ಡೆಲ್ಟಾ ತಳಿಯನ್ನು ತಡೆಗಟ್ಟಲು ಅನುಸರಿಸಿದ್ದ ಕ್ರಮಗಳನ್ನೇ ಅನುಸಿರಿಸದರೆ ಸಾಕು’ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

* 90%ವಿಶ್ವದ ಎಲ್ಲೆಡೆ ಪ್ರತಿದಿನ ಪತ್ತೆಯಾಗುತ್ತಿರುವ ಪ್ರಕರಣಗಳಲ್ಲಿ ಡೆಲ್ಟಾ ಪ್ರಕರಣಗಳ ಪ್ರಮಾಣ

* 10% ಆಲ್ಪಾ, ಓಮೈಕ್ರಾನ್, ಡೆಲ್ಟಾ ಪ್ಲಸ್ ಪ್ರಕರಣಗಳ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.