ADVERTISEMENT

ಗಾಲ್ವನ್ ಕಣಿವೆ ತಮಗೆ ಸೇರಿದ್ದು ಎಂಬ ಚೀನಾ ಹೇಳಿಕೆಗೆ ಉತ್ತರಿಸಿ: ಶಿವಸೇನಾ ಆಗ್ರಹ

ಚೀನಾ

ಪಿಟಿಐ
Published 20 ಜೂನ್ 2020, 7:18 IST
Last Updated 20 ಜೂನ್ 2020, 7:18 IST
ಪ್ರಿಯಾಂಕಾ ಚತುರ್ವೇದಿ
ಪ್ರಿಯಾಂಕಾ ಚತುರ್ವೇದಿ   

ಮುಂಬೈ: ‘ಲಡಾಖ್‌ನ ಗಾಲ್ವನ್‌ ಕಣಿವೆ ಮೇಲೆ ಸಾರ್ವಭೌಮತೆ ತಮ್ಮದು ಎಂಬ ಚೀನಾ ಹೇಳಿಕೆಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಬೇಕು’ ಎಂದು ಕೇಂದ್ರ ಸರ್ಕಾರವನ್ನು ಶಿವಸೇನಾ ಶನಿವಾರ ಒತ್ತಾಯಿಸಿದೆ.

ಸೋಮವಾರ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಬಲಿಯಾಗಿದ್ದರು.

‘ಗಾಲ್ವನ್ ಕಣಿವೆಯಲ್ಲಿ ಚೀನಾಕ್ಕೆ ಹಕ್ಕು ಇಲ್ಲ. ವಾಸ್ತವ ಗಡಿ ರೇಖೆಯಲ್ಲಿ ನಡೆಸುತ್ತಿರುವ ಚಟುವಟಿಕೆಗಳಿಂದ ಚೀನಾ ಹಿಂದೆ ಸರಿಯಬೇಕು’ ಎಂದು ಭಾರತ ತಿಳಿಸಿತ್ತು. ಆದರೆ ಗಾಲ್ವನ್ ಕಣಿವೆಯು ಚೀನಾದ ಭೂಭಾಗದಲ್ಲಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಶುಕ್ರವಾರ ಹೇಳಿದೆ.

ADVERTISEMENT

ಭಾರತದ ಭೂಮಿ ಮೇಲೆ ಯಾರೂ ಅತಿಕ್ರಮಣ ಮಾಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರವಷ್ಟೇ ಹೇಳಿಕೆ ನೀಡಿದ್ದರು.

‘ಚೀನಾಕ್ಕೆ ದೇಶದ ಯಾವುದೇ ಭೂ ಭಾಗವನ್ನು ಬಿಟ್ಟುಕೊಡುವುದಿಲ್ಲ ಎಂದು ಪ್ರಧಾನಿ ದೇಶದ ಜನರಿಗೆ ಅಭಯ ನೀಡಿದ್ದಾರೆ. ಅತ್ತ ಚೀನಾ ಮಾತ್ರ ಗಾಲ್ವನ್ ಕಣಿವೆ ತನಗೆ ಸೇರಿದ್ದು ಎಂದು ಪ್ರತಿಪಾದಿಸುತ್ತಿದೆ. ಈ ಬಗ್ಗೆ ಪ್ರಧಾನಿ ಸ್ಪಷ್ಟನೆ ನೀಡಬೇಕು’ ಎಂದು ಸೇನಾ ಮುಖಂಡರಾದ ಪ್ರಿಯಂಕಾ ಚತುರ್ವೇದಿ ಅವರು ಟ್ವಿಟರ್‌ನಲ್ಲಿ ಆಗ್ರಹಿಸಿದ್ದಾರೆ.

‘ಇದಕ್ಕೆ ಸರ್ಕಾರ ಸ್ಪಷ್ಟನೆ ನೀಡದಿರುವುದನ್ನು ಒಪ್ಪಲಾಗದು. ಗಾಲ್ವನ್‌ ಕಣಿವೆಯನ್ನು ಚೀನಾಕ್ಕೆ ಕೊಟ್ಟಿದ್ದೇವೆಯೇ ಅಥವಾ ಅಲ್ಲಿಂದ ಚೀನಾ ಸೇನೆಯನ್ನು ಓಡಿಸಿದ್ದೇವೆಯೇ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಇದನ್ನು ದೇಶದ ಜನರಿಗೆ ತಿಳಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.