ADVERTISEMENT

ಕೇಂದ್ರದಿಂದ ನರೇಗಾ ವೇತನ ಹೆಚ್ಚಳ

ಪಿಟಿಐ
Published 26 ಮಾರ್ಚ್ 2023, 10:47 IST
Last Updated 26 ಮಾರ್ಚ್ 2023, 10:47 IST
MGNREGA
MGNREGA   

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ (2023–24) ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂ–ನರೇಗಾ)ಅಡಿಯಲ್ಲಿನ ಕಾರ್ಮಿಕರಿಗೆ ವೇತನ ಹೆಚ್ಚಳ ಮಾಡಿ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದೆ.

ನೂತನ ವೇತನ ದರವು ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಅಧಿಸೂಚನೆಯ ಪ್ರಕಾರ ಹರಿಯಾಣದಲ್ಲಿ ಗರಿಷ್ಠ ವೇತನ ಅಂದರೆ ದಿನಕ್ಕೆ ₹357, ಮಧ್ಯಪ್ರದೇಶ ಮತ್ತು ಛತ್ತೀಸಗಢದಲ್ಲಿ ಕನಿಷ್ಠ ಅಂದರೆ ದಿನಕ್ಕೆ ₹221 ವೇತನ ನಿಗದಿಪಡಿಸಲಾಗಿದೆ.

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಇದೇ 24ರಂದು ನರೇಗಾ ಯೋಜನೆಯಡಿಯಲ್ಲಿನ ಕೂಲಿಯ ದರವನ್ನು ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದೆ. ₹ 7ರಿಂದ ₹ 26ರ ತನಕ ವೇತನ ಹೆಚ್ಚಳವಾಗಿದೆ.

ADVERTISEMENT

ಕಳೆದ ವರ್ಷದ ದರಗಳಿಗೆ ಹೋಲಿಸಿದರೆ, ರಾಜಸ್ಥಾನವು ಹೆಚ್ಚಿನ ಶೇಕಡಾವಾರು ವೇತನ ಹೆಚ್ಚಳ ದಾಖಲಿಸಿದೆ. ರಾಜಸ್ಥಾನದಲ್ಲಿ 2022–23ರಲ್ಲಿ ವೇತನವು ₹ 231 ಇತ್ತು. ನೂತನ ಪರಿಷ್ಕೃತ ವೇತನವು ದಿನಕ್ಕೆ ₹ 255 ಆಗಿದೆ. ಅಂತೆಯೇ ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲೂ ವೇತನ ದರವು ಕಳೆದವರ್ಷಕ್ಕಿಂತ ಶೇಕಡ 8ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಈ ರಾಜ್ಯಗಳಲ್ಲಿ ದಿನಕ್ಕೆ ₹ 210 ವೇತನವಿತ್ತು. ಇದೀಗ ₹ 228ಕ್ಕೆ ವೇತನ ಹೆಚ್ಚಳವಾಗಿದೆ.

ಛತ್ತೀಸಗಢ ಮತ್ತು ಮಧ್ಯಪ್ರದೇಶದಲ್ಲಿ ಕಳೆದ ವರ್ಷ ₹ 204 ವೇತನವಿತ್ತು. ಈ ವರ್ಷ ಶೇ 17ರಷ್ಟು ಪ್ರಮಾಣದಲ್ಲಿ ವೇತನ ಹೆಚ್ಚಳವಾಗಿದ್ದು ವೇತನದರವು ₹221 ಆಗಿದೆ.

ಕರ್ನಾಟಕ, ಗೋವಾ, ಮೇಘಾಲಯ ಮತ್ತು ಮಣಿಪುರ ರಾಜ್ಯಗಳಲ್ಲಿ ಕಡಿಮೆ ಪ್ರಮಾಣದಲ್ಲಿ ವೇತನ ಹೆಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.