ADVERTISEMENT

ರಾಜ್ಯಗಳ ಬದಲಿಗೆ ಕೇಂದ್ರದಿಂದಲೇ ಔಷಧ ತಯಾರಿಕೆ: ಹೊಸ ಮಸೂದೆ ಪ್ರಸ್ತಾಪ

ಪಿಟಿಐ
Published 12 ಮಾರ್ಚ್ 2023, 13:31 IST
Last Updated 12 ಮಾರ್ಚ್ 2023, 13:31 IST
Drug-Medicine
Drug-Medicine   

ನವದೆಹಲಿ: ಔಷಧ, ವೈದ್ಯಕೀಯ ಸಾಧನ ಮತ್ತು ಸೌಂದರ್ಯವರ್ಧಕಗಳ ಹೊಸ ಮಸೂದೆ 2023ರ ಪರಿಷ್ಕೃತ ಕರಡು ಪ್ರಕಾರ, ಈಗಿರುವ ನಿಯಮದಂತೆ ಔಷಧ ಅಥವಾ ಸೌಂದರ್ಯವರ್ಧಕಗಳ ತಯಾರಿಕೆಯ ಅಧಿಕಾರವನ್ನು ರಾಜ್ಯಗಳ ಔಷಧ ನಿಯಂತ್ರಕರಿಗೆ ಬದಲಿಗೆ ಕೇಂದ್ರ ಔಷಧೀಯ ಗುಣಮಟ್ಟ ನಿಯಂತ್ರಣ ಸಂಸ್ಥೆಗೆ (ಸಿಡಿಎಸ್‌ಸಿಒ) ನೀಡಬೇಕೆಂದು ಕೇಂದ್ರ ಸರ್ಕಾರವು ಪ್ರಸ್ತಾಪಿಸಿದೆ.

ಆದರೆ, ಔಷಧಗಳು, ಸೌಂದರ್ಯವರ್ಧಕಗಳು ಮತ್ತು ವೈದ್ಯಕೀಯ ಉಪಕರಣಗಳ ಮಾರಾಟ ಆಯಾ ರಾಜ್ಯ ಸರ್ಕಾರಗಳ ನಿಯಂತ್ರಣಕ್ಕೊಳಪಡುತ್ತವೆ ಎಂದು ಕೇಂದ್ರವು ಹೇಳಿದೆ. ಈಗಿರುವ ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ–1940 ಅನ್ನು ಬದಲಿಸಿ, ಹೊಸ ಕಾಯ್ದೆಯನ್ನು ತರುವುದಾಗಿಯೂ ಕೇಂದ್ರವು ತಿಳಿಸಿದೆ.

ಹೊಸ ಮಸೂದೆಯ ಪರಿಷ್ಕೃತ ಕರಡಿನ ಪ್ರಕಾರ, ಇ–ಫಾರ್ಮಸಿ ನಡೆಸಲು ಅನುಮತಿ ಪಡೆಯುವ ನಿಬಂಧನೆಯನ್ನು ತೆಗೆದುಹಾಕಲಾಗಿದೆ. ಇನ್ನು ಮುಂದೆ ಆನ್‌ಲೈನ್ ಮಾಧ್ಯಮದ ಮೂಲಕ ಯಾವುದೇ ಔಷಧಿಯ ಮಾರಾಟ, ಸಂಗ್ರಹಣೆ, ಪ್ರದರ್ಶನ, ವಿತರಣೆಯನ್ನು ಕೆಂದ್ರ ಸರ್ಕಾರವು ನಿಯಂತ್ರಿಸಬಹುದು, ನಿರ್ಬಂಧಿಸಬಹುದು ಅಥವಾ ನಿಷೇಧಿಸಬಹುದಾಗಿದೆ.

ADVERTISEMENT

2022ರ ಜುಲೈನಲ್ಲಿ ಹೊಸ ಕರಡನ್ನು ಸಾರ್ವಜನಿಕ ಚರ್ಚೆಗೆ ಬಿಡಲಾಗಿತ್ತು. ಈ ಬಗ್ಗೆ ಹಲವು ಪ್ರತಿಕ್ರಿಯೆಗಳನ್ನು ಸ್ವೀಕರಿಸಲಾಗಿದ್ದು, ಇದನ್ನು ಸಚಿವಾಲಯವು ಪರಿಷ್ಕರಿಸಿದ್ದು, ಅಂತರ ಸಚಿವಾಲಯದ ಸಮಾಲೋಚನೆಗಾಗಿ ಕಳುಹಿಸಿದೆ.

ಪ್ರಸ್ತುತ, ಔಷಧಗಳು ಮತ್ತು ಸೌಂದರ್ಯವರ್ಧಕಗಳಿಗೆ ಸಂಬಂಧಿಸಿದ ಎಲ್ಲಾ ಉತ್ಪಾದನಾ ಚಟುವಟಿಕೆಗಳನ್ನು ಆಯಾ ರಾಜ್ಯ ಸರ್ಕಾರಗಳು ತಮ್ಮ ಔಷಧ ನಿಯಂತ್ರಣ ಸಂಸ್ಥೆಗಳ ಮೂಲಕವೇ ನಿಯಂತ್ರಿಸುತ್ತವೆ. ಪ್ರಸ್ತಾವಿತ ಮಸೂದೆಯನ್ನು ಸಂಸತ್ತು ಅಂಗೀಕರಿಸಿದ ನಂತರ, ಔಷಧಗಳು ಮತ್ತು ಸೌಂದರ್ಯವರ್ಧಕಗಳ ತಯಾರಿಕೆಯ ನಿಯಂತ್ರಣಕ್ಕೆ ಸಂಬಂಧಿಸಿದ ರಾಜ್ಯ ಸರ್ಕಾರಗಳ ಎಲ್ಲಾ ಅಧಿಕಾರಗಳು ಸಿಡಿಎಸ್‌ಸಿಒ ಮೂಲಕ ಕೇಂದ್ರಕ್ಕೆ ಹೋಗುತ್ತವೆ ಎಂದು ಅಧಿಕೃತ ಮೂಲಗಳು ವಿವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.