ನವದೆಹಲಿ: ಔಷಧ ಗುಣಮಟ್ಟ ಪರೀಕ್ಷೆ ಮತ್ತು ಮಾರುಕಟ್ಟೆ ಕಣ್ಗಾವಲು ಹಾಗೂ ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕಗಳ ನಿಯಂತ್ರಣಕ್ಕಾಗಿರುವ ಕಾನೂನು ಚೌಕಟ್ಟನ್ನು ಬಲಪಡಿಸಲು ಕೇಂದ್ರ ಸರ್ಕಾರ ಹೊಸ ಕಾನೂನೊಂದನ್ನು ರೂಪಿಸುತ್ತಿದೆ.
‘ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ 2025’ರ ಕರಡು ಮಸೂದೆಯನ್ನು ಮಂಗಳವಾರ ನಡೆದ ಕೇಂದ್ರ ಆರೋಗ್ಯ ಸಚಿವಾಲಯದ ಉನ್ನತ ಮಟ್ಟದ ಸಭೆಯಲ್ಲಿ ಭಾರತೀಯ ಔಷಧ ಮಹಾನಿಯಂತ್ರಕ (ಡಿಸಿಜಿಐ) ಡಾ. ರಾಜೀವ್ ರಘುವಂಶಿ ಮಂಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮಸೂದೆಯನ್ನು ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪರಿಚಯಿಸಲು ಉದ್ದೇಶಿಸಲಾಗಿದೆ.
ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ವಹಿಸಿದ್ದರು. ಸಭೆಯಲ್ಲಿ ಡಿಸಿಜಿಐ ಮತ್ತು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಹಿರಿಯ ಅಧಿಕಾರಿಗಳು ಪ್ರಸ್ತಾವಿತ ಕಾನೂನಿನ ಚೌಕಟ್ಟನ್ನು ವಿವರಿಸಿದರು.
ಭಾರತೀಯ ಔಷಧ ತಯಾರಕರ ಗುಣಮಟ್ಟದಲ್ಲಿ ಗಂಭೀರ ಲೋಪಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಸೇರಿದಂತೆ ವಿಶ್ವದಾದ್ಯಂತ ಆರೋಗ್ಯ ನಿಯಂತ್ರಕರು ಪದೇ ಪದೇ ದೂರುಗಳು ಮತ್ತು ಆತಂಕಗಳನ್ನು ವ್ಯಕ್ತಪಡಿಸುತ್ತಿರುವ ಕಾರಣ ಕೇಂದ್ರ ಸರ್ಕಾರ ಈ ಕಾನೂನನ್ನು ರೂಪಿಸಲು ಮುಂದಾಗಿದೆ.