ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್
ಪಿಟಿಐ ಚಿತ್ರ
ಹೈದರಾಬಾದ್: ತೆಲಂಗಾಣ ಸರ್ಕಾರವು ಮುಸ್ಲಿಮರನ್ನು ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಗೆ ಸೇರಿಸಲು ಮುಂದಾಗಿರುವುದನ್ನು ಕೇಂದ್ರ ಸರ್ಕಾರ ಒಪ್ಪುವುದಿಲ್ಲ ಎಂದು ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಶನಿವಾರ ಹೇಳಿದ್ದಾರೆ.
ಒಬಿಸಿ ಮೀಸಲಾತಿಯನ್ನು ಶೇ 42ಕ್ಕೆ ಹೆಚ್ಚಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ವಿಧಾನಸಬೆಯಲ್ಲಿ ಅಂಗೀಕರಿಸುವ ಹಾಗೂ ಸಂಸತ್ತಿನ ಅನುಮೋದನೆಗೆ ಕೇಂದ್ರಕ್ಕೆ ಕಳುಹಿಸುವ ಯೋಜನೆಯನ್ನು ತೆಲಂಗಾಣ ಸರ್ಕಾರ ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಂಜಯ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 'ಈ ವಿಚಾರದಲ್ಲಿ ನಾವು ಸ್ಪಷ್ಟವಾಗಿದ್ದೇವೆ. ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಕ್ರಮವನ್ನು ಕೇಂದ್ರ ಸರ್ಕಾರ ಒಪ್ಪುವುದಿಲ್ಲ. ಧರ್ಮ ಆಧಾರಿತ ಮೀಸಲಾತಿಯನ್ನು ವಿರೋಧಿಸುತ್ತೇವೆ' ಎಂದಿದ್ದಾರೆ.
ಕೇಂದ್ರ ಗೃಹ ಇಲಾಖೆ ರಾಜ್ಯ ಖಾತೆ ಸಚಿವರಾಗಿರುವ ಸಂಜಯ್, ಮುಸ್ಲಿಮರನ್ನು ಒಬಿಸಿ ವರ್ಗದಿಂದ ಕೈಬಿಟ್ಟು ನಂತರ ಕಳುಹಿಸುವುದಾದರೆ, ರಾಜ್ಯ ಬಿಜೆಪಿ ನಾಯಕರು ಮಸೂದೆ ಅಂಗೀಕರಿಸುವಂತೆ ಕೇಂದ್ರದ ಮನವೊಲಿಸಲು ಒತ್ತಡ ಹೇರಲು ಪ್ರಯತ್ನಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
'ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವುದರಿಂದ, ಉದ್ಯೋಗ, ಮೀಸಲಾತಿ, ಶಿಕ್ಷಣದ ಅವಕಾಶಗಳು, ಬಜೆಟ್ ಹಂಚಿಕೆ ಮತ್ತು ಇತರ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗದವರಿಗೆ ತೊಂದರೆಯಾಗಲಿದೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಹಾಗೆಯೇ, 'ಅಲ್ಪಸಂಖ್ಯಾತರು ಮತ್ತು ಆರ್ಥಿವಾಗಿ ದುರ್ಬಲ ವರ್ಗಗಳ (ಇಡಬ್ಲ್ಯುಎಸ್) ವರ್ಗಗಳ ಅಡಿಯಲ್ಲಿ ಮುಸ್ಲಿಮರು ಈಗಾಗಲೇ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ' ಎಂದು ಪ್ರತಿಪಾದಿಸಿದ್ದಾರೆ.
ಮುಸ್ಲಿಮರ ಮತಗಳು ಏಕಪಕ್ಷೀಯವಾಗಿ ಇರುವುದರಿಂದ ಮುಂಬರುವ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾದ ಕ್ಷೇತ್ರಗಳನ್ನೂ ಗೆದ್ದುಕೊಳ್ಳಲಿದ್ದಾರೆ. ಅವರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವುದರಿಂದ ತಮಗೆ ತೊಂದರೆಯಾಗಲಿದೆ ಎಂದು ಇತರ ಜಾತಿಯವರು ವಿರೋಧ ವ್ಯಕ್ತಪಡಿಸಲಿದ್ದಾರೆ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.