ADVERTISEMENT

ಚಾರ್‌ಧಾಮ್‌ ಯಾತ್ರಾ ಮಾರ್ಗಗಳು ವಲಯಗಳಾಗಿ ವಿಭಜನೆ; 6 ಸಾವಿರ ಪೊಲೀಸರ ನಿಯೋಜನೆ

ಪಿಟಿಐ
Published 5 ಏಪ್ರಿಲ್ 2025, 9:49 IST
Last Updated 5 ಏಪ್ರಿಲ್ 2025, 9:49 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಡೆಹ್ರಾಡೂನ್: ಹಿಮಾಲಯದ ತಪ್ಪಲಿನಲ್ಲಿರುವ ನಾಲ್ಕು ಪ್ರಮುಖ ದೇವಾಲಯಗಳ ವಾರ್ಷಿಕ ಪ್ರವಾಸವಾದ ಚಾರ್‌ಧಾಮ್‌ ಯಾತ್ರಾದ ಮರ್ಗದ ಉತ್ತಮ ನಿರ್ವಹಣೆಗಾಗಿ 15 ಸೂಪರ್‌ ವಲಯಗಳಾಗಿ, 41 ವಲಯಗಳಾಗಿ ಮತ್ತು 137 ಸೆಕ್ಟರ್‌ಗಳಾಗಿ ವಿಭಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಶನಿವಾರ ತಿಳಿಸಿದ್ದಾರೆ.

‘ಯಾತ್ರೆಯಲ್ಲಿ ಭಾಗವಹಿಸುವವರ ಸುರಕ್ಷತೆಗಾಗಿ ಮತ್ತು ಸಾರಿಗೆ ವ್ಯವಸ್ಥೆಗಾಗಿ ಈ ಮಾರ್ಗದಲ್ಲಿ ಆರು ಸಾವಿರ ಪೊಲೀಸರನ್ನು ನಿಯೋಜಿಸಲಾಗುವುದು’ ಎಂದು ಇನ್‌ಸ್ಪೆಕ್ಟರ್ ಜನರಲ್‌ ಗರ್ವಾಲ್ ಸ್ವರೂಪ್ ಹೇಳಿದ್ದಾರೆ.

ADVERTISEMENT

‘ಪ್ರತಿ ವಲಯವೂ 10 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಈ ವಲಯಕ್ಕೆ ನಿಯೋಜನೆಗೊಂಡ ಭದ್ರತಾ ಸಿಬ್ಬಂದಿ ದಿನದ 24 ಗಂಟೆಗಳ ಕಾಲವೂ ಗಸ್ತು ತಿರುಗಲಿದ್ದಾರೆ. ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದ್ದು, ಸಂಚಾರ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಲೋಕಜೀತ್ ಸಿಂಗ್ ಅವರು ಇದರ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಭದ್ರತಾ ವ್ಯವಸ್ಥೆ, ಸಂಚಾರ, ಜನದಟ್ಟಣೆ ಮತ್ತು ವಿಪತ್ತು ನಿರ್ವಹಣೆಯ ಸಿದ್ಧತೆಗಳನ್ನು ಇವರೇ ನೋಡಿಕೊಳ್ಳಲಿದ್ದಾರೆ’ ಎಂದಿದ್ದಾರೆ.

ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯ ಏ. 30ರಂದು ಬಾಗಿಲು ತೆರೆಯಲಿದ್ದು, ಇದರ ಮೂಲಕ ಚಾರ್‌ಧಾಮ್ ಯಾತ್ರಾ ಆರಂಭಗೊಳ್ಳಲಿದೆ. ಮೇ 2ರಂದು ಕೇದಾರನಾಥ ಹಾಗೂ ಮೇ 4ರಂದು ಬದರೀನಾಥ ದೇಗುಲಗಳು ಬಾಗಿಲು ತೆರೆಯಲಿವೆ. 

‘ಯಾತ್ರಾ ನಿಯಂತ್ರಣ ಕೊಠಡಿ, ವಲಯ ಕಚೇರಿಯ ಜತೆಗೆ ಚಾರ್‌ಧಾಮ್ ಕೋಶವನ್ನು ತೆರೆಯಲಾಗಿದೆ. ಪ್ರತಿ ವಲಯವನ್ನೂ ಡ್ರೋನ್‌ ಹಾಗೂ ಸಿಸಿಟಿವಿ ಕ್ಯಾಮೆರಾ ಮೂಲಕ ನಿಗಾ ವಹಿಸಲಾಗುವುದು. ಈ ಬಾರಿಯ ಚಾರ್‌ಧಾಮ್‌ ಯಾತ್ರಾದ ಭದ್ರತೆಗಾಗಿ 24 ಡಿಎಸ್‌ಪಿ, 66 ಇನ್‌ಸ್ಪೆಕ್ಟರ್‌, 366 ಸಬ್‌ ಇನ್‌ಸ್ಟೆಕ್ಟರ್‌, 926 ಗೃಹರಕ್ಷಕದ ದಳದ ಸಿಬ್ಬಂದಿ, 1049 ಪಿಆರ್‌ಡಿ ಜವಾನ್‌, ಸಶಸ್ತ್ರ ಪಡೆಯ 9 ತುಕಡಿ ಹಾಗೂ ರಾಜ್ಯ ವಿಪತ್ತು ರೈಫಲ್‌ ಪಡೆಯ 26 ತಂಡಗಳನ್ನು ನಿಯೋಜಿಸಲಾಗುತ್ತಿದೆ’ ಎಂದು ಗರ್ವಾಲ್ ಸ್ವರೂಪ್ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.