ADVERTISEMENT

ಮಳೆ, ಭೂಕುಸಿತ; ಚಾರ್‌ಧಾಮ್‌ ಯಾತ್ರೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 14:02 IST
Last Updated 3 ಜುಲೈ 2025, 14:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ನಿರಂತರ ಮಳೆಯಿಂದ ಹಲವೆಡೆ ಭೂಕುಸಿತ ಸಂಭವಿಸಿದ್ದರಿಂದ ಉತ್ತರಾಖಂಡದ ಚಾರ್‌ಧಾಮ್‌ ಯಾತ್ರೆಯನ್ನು ಗುರುವಾರ ಸ್ಥಗಿತಗೊಳಿಸಲಾಗಿದೆ. ಮಾರ್ಗ ಮಧ್ಯದಲ್ಲಿ ಸಿಲುಕಿದ ಯಾತ್ರಾರ್ಥಿಗಳನ್ನು ಕೇಂದ್ರ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಯ (ಎಸ್‌ಡಿಆರ್‌ಎಫ್‌) ಸಿಬ್ಬಂದಿ ಹಾಗೂ ಪೊಲೀಸರು ರಕ್ಷಿಸಿದ್ದಾರೆ.

ಕೇದರನಾಥಕ್ಕೆ ತೆರಳುವ ಹೆದ್ದಾರಿಯ ಸೋನ್‌ಪ್ರಯಾಗ್‌ ಹಾಗೂ ಗೌರಿಕುಂಡದ ಮಧ್ಯೆ ಭೂಕುಸಿತ ಸಂಭವಿಸಿ ರಸ್ತೆಗೆ ಮಣ್ಣು, ಬಂಡೆಗಳು ಬಂದು ಬಿದ್ದಿವೆ. 

‘ರಸ್ತೆಯು ಸಂಪೂರ್ಣವಾಗಿ ಮುಚ್ಚಿದ್ದು, ಎಸ್‌ಡಿಆರ್‌ಎಫ್‌ ಸಿಬ್ಬಂದಿ ಯಾತ್ರಾರ್ಥಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು. ಬಂಡೆಗಳನ್ನು ತೆರವುಗೊಳಿಸಿದ ಬಳಿಕವೇ ಯಾತ್ರೆಯು ಮತ್ತೆ ಆರಂಭವಾಗಲಿದೆ’ ಎಂದು ರುದ್ರಪ್ರಯಾಗ್‌ ಜಿಲ್ಲೆಯ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಕೇದಾರನಾಥದಿಂದ ಹಿಂತಿರುಗುತ್ತಿದ್ದ 40 ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಅವರೆಲ್ಲರನ್ನೂ ಎಸ್‌ಡಿಆರ್‌ಎಫ್‌ ಸಿಬ್ಬಂದಿ ರಕ್ಷಿಸಿದ್ದಾರೆ.

ಭೂಕುಸಿತದಿಂದ ಯುಮನೋತ್ರಿಗೆ ತೆರಳುವ ಹೆದ್ದಾರಿಯನ್ನು ಬಂದ್‌ ಮಾಡಲಾಗಿದೆ. ಸೆಲಾಯಿ ಬಂದ್‌ ಹಾಗೂ ಒಜ್ರಿ ನಡುವೆ ಹೆದ್ದಾರಿಯು ಮಳೆಯಿಂದ ಕೊಚ್ಚಿಹೋಗಿದ್ದು, ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

‘ಯಾತ್ರಾರ್ಥಿಗಳ ಸುರಕ್ಷತೆಯೇ ಸರ್ಕಾರದ ಮೊದಲ ಆದ್ಯತೆ’ ಎಂದು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ತಿಳಿಸಿದ್ದಾರೆ.

‘ಅಲಕಾನಾಂದ ನದಿ ಸೇರಿದಂತೆ ರಾಜ್ಯದ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದ ತಗ್ಗುಪ್ರದೇಶದಲ್ಲಿರುವ ಮನೆ ಹಾಗೂ ದೇವಸ್ಥಾನಗಳು ನೀರಿನಲ್ಲಿ ಮುಳುಗಿವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.