ADVERTISEMENT

ಕೊರೊನಾ ಲಸಿಕೆ: ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ

ರಾಜ್ಯ ಸರ್ಕಾರಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ

ಪಿಟಿಐ
Published 25 ಜನವರಿ 2021, 13:30 IST
Last Updated 25 ಜನವರಿ 2021, 13:30 IST
ಅಜಯ್‌ ಕುಮಾರ್‌ ಭಲ್ಲಾ
ಅಜಯ್‌ ಕುಮಾರ್‌ ಭಲ್ಲಾ   

ನವದೆಹಲಿ: ‘ಕೊರೊನಾ ಲಸಿಕೆ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವ ಹಾಗೂ ಸುಳ್ಳು ಸುದ್ದಿಗಳನ್ನು ಪಸರಿಸುತ್ತಿರುವವರ ವಿರುದ್ಧ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಿ’ ಎಂದು ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಸೋಮವಾರ ಸೂಚಿಸಿದೆ.

ಈ ಸಂಬಂಧ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತನಾಡಿರುವ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್‌ಕುಮಾರ್‌ ಭಲ್ಲಾ ‘ಸೀರಂ ಇನ್‌ಸ್ಟಿಟ್ಯೂಟ್‌ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್‌ ಹಾಗೂ ಭಾರತ್‌ ಬಯೋಟೆಕ್‌ ಸಂಸ್ಥೆ ತಯಾರಿಸಿರುವ ಕೊವ್ಯಾಕ್ಸಿನ್‌ ಲಸಿಕೆಗಳಿಂದ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ. ಇವುಪ್ರತಿರೋಧಕ ಶಕ್ತಿ ಹೊಂದಿವೆ ಎಂದು ಭಾರತೀಯ ಪ್ರಧಾನ ಔಷಧ ನಿಯಂತ್ರಕವೇ ತಿಳಿಸಿದೆ’ ಎಂದಿದ್ದಾರೆ.

‘ತಜ್ಞರ ತಂಡ ನೀಡಿದ್ದ ಶಿಫಾರಸಿನ ಆಧಾರದಲ್ಲೇ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕೋವಿಡ್‌ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ. ಎರಡು ಮತ್ತು ಮೂರನೇ ಹಂತಗಳಲ್ಲಿ ಇತರರಿಗೆ ಲಸಿಕೆ ನೀಡಲಾಗುತ್ತದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಕೋವಿಶೀಲ್ಡ್‌ ಹಾಗೂ ಕೊವ್ಯಾಕ್ಸಿನ್‌ ಲಸಿಕೆಗಳು ಸುರಕ್ಷಿತ ಎಂದು ರಾಷ್ಟ್ರೀಯ ನಿಯಂತ್ರಕ ಪ್ರಾಧಿಕಾರವೇ ಹೇಳಿದೆ. ಹೀಗಿದ್ದರೂ ಕೆಲವರು ಸಾಮಾಜಿಕ ಜಾಲತಾಣ ಹಾಗೂ ಇತರ ಮಾಧ್ಯಮಗಳ ಮೂಲಕ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಸುದ್ದಿಗಳಿಂದಾಗಿ ಲಸಿಕೆಯ ಕಾರ್ಯಕ್ಷಮತೆಯ ಬಗ್ಗೆಯೇ ಅನುಮಾನಗಳು ಏಳುವಂತಾಗಿವೆ. ಜನರಲ್ಲಿ ಭಯದ ವಾತಾವರಣವೂ ಸೃಷ್ಟಿಯಾಗಿದೆ’ ಎಂದು ಅವರು ಹೇಳಿದ್ದಾರೆ.

‘ಲಸಿಕೆಯ ಬಗ್ಗೆ ಅಪಪ್ರಚಾರ ನಡೆಸುತ್ತಿರುವವರ ಮೇಲೆ ನಿಗಾ ಇಡಬೇಕು. ಲಸಿಕೆಗಳ ಸುರಕ್ಷತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು. ಲಸಿಕೆ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವ ವ್ಯಕ್ತಿ, ಸಂಸ್ಥೆ ಅಥವಾ ಇನ್ಯಾರೆ ಆಗಿದ್ದರೂ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು’ ಎಂದೂ ಅವರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.