ಚೀತಾ ಮರಿಗಳು
ಭೋಪಾಲ್: ಮಧ್ಯಪ್ರದೇಶದ ಶೋಪುರ ಜಿಲ್ಲೆಯ ಕುನೊ ರಾಷ್ಟ್ರೀಯ ಉದ್ಯಾನದಲ್ಲಿನ ಚೀತಾ ವೀರಾ ಎರಡು ಮರಿಗಳಿಗೆ ಜನ್ಮ ನೀಡಿದೆ ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ತಿಳಿಸಿದ್ದಾರೆ.
ಈ ಎರಡು ಮರಿಗಳ ಜನನದಿಂದ ಕುನೊದಲ್ಲಿ ಚೀತಾಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಈ ಪೈಕಿ 14 ಮರಿಗಳಿವೆ.
‘ಮಧ್ಯಪ್ರದೇಶದ ಜಂಗಲ್ ಬುಕ್‌ಗೆ ಎರಡು ಚಿರತೆ ಮರಿಗಳು ಪ್ರವೇಶಿಸಿವೆ. ರಾಜ್ಯದಲ್ಲಿ ಚಿರತೆಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವ ಸಂಗತಿಯನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ಇಂದು ಚೀತಾ ವೀರಾ ಎರಡು ಮರಿಗಳಿಗೆ ಜನ್ಮ ನೀಡಿದೆ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಚೀತಾ ಯೋಜನೆಯಲ್ಲಿ ನಿರತರಾಗಿರುವ ಅಧಿಕಾರಿಗಳು, ವೈದ್ಯರಿಗೆ ಅಭಿನಂದನೆಗಳು. ಅವರ ಅವಿರತ ಶ್ರಮದ ಫಲವಾಗಿ ಮಧ್ಯಪ್ರದೇಶವನ್ನು ‘ಚೀತಾಗಳ ನಾಡು’ ಎಂದು ಕರೆಯಲಾಗುತ್ತಿದೆ’ ಎಂದು ಮೋಹನ್ ಯಾದವ್ ಸಂತಸ ಹಂಚಿಕೊಂಡಿದ್ದಾರೆ.
‘ರಾಜ್ಯದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತಿದೆ. ಹೊಸ ಉದ್ಯೋಗಗಳು ಹೆಚ್ಚಾಗಲಿವೆ. ನಾವು ಚೀತಾಗಳೊಂದಿಗೆ ಎಲ್ಲಾ ವನ್ಯಜೀವಿಗಳ ಸಂರಕ್ಷಣೆಗೆ ಸದಾ ಸಿದ್ಧರಿದ್ದೇವೆ’ ಎಂದು ಯಾದವ್ ಹೇಳಿದ್ದಾರೆ.
2022ರ ಸೆಪ್ಟೆಂಬರ್‌ನಲ್ಲಿ ನಮೀಬಿಯಾದಿಂದ 8, ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಭಾರತಕ್ಕೆ ತರಲಾಗಿತ್ತು. ಈ ಪೈಕಿ ಏಳು ಚೀತಾಗಳು ಮೃತಪಟ್ಟಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.