
ಚೆನ್ನೈ: ಕೇಂದ್ರ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ಪ್ರಶಸ್ತಿ ಘೋಷಣೆಯ ವಿಳಂಬ ನೀತಿಯನ್ನು ಕಟುವಾಗಿ ಟೀಕಿಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು, ಇನ್ನು ಮುಂದೆ ತಮಿಳುನಾಡು ಸರ್ಕಾರವೇ ರಾಷ್ಟ್ರಮಟ್ಟದ ಅತ್ಯುತ್ತಮ ಸಾಹಿತ್ಯ ಕೃತಿಗೆ ₹5 ಲಕ್ಷ ಮೊತ್ತದ ‘ಶಾಸ್ತ್ರೀಯ ಭಾಷಾ ಸಾಹಿತ್ಯ ಪ್ರಶಸ್ತಿ’ ನೀಡುವುದಾಗಿ ಘೋಷಿಸಿದರು.
ಇಲ್ಲಿನ ಕಲೈವಾನರ್ ಅರಂಗಂನಲ್ಲಿ ಭಾನುವಾರ ನಡೆದ ಚೆನ್ನೈ ಅಂತರರಾಷ್ಟ್ರೀಯ ಪುಸ್ತಕಮೇಳದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಕೇಂದ್ರ ಸಾಹಿತ್ಯ ಅಕಾಡೆಮಿಯು 2025ರ ಪ್ರಶಸ್ತಿಗಳನ್ನು ಅಂತಿಮಗೊಳಿಸಿ, ಘೋಷಿಸಬೇಕಿತ್ತು. ಆದರೆ, ಕೇಂದ್ರ ಸಂಸ್ಕೃತಿ ಸಚಿವಾಲಯದ ಹಸ್ತಕ್ಷೇಪದಿಂದ ಪ್ರಶಸ್ತಿ ಘೋಷಣೆಗೆ ತಡೆಯೊಡ್ಡಲಾಗಿದೆ. ಇನ್ನು ಮುಂದೆ ಅದು ನಡೆಯುತ್ತದೆಯೋ ಇಲ್ಲವೋ ಎಂಬುದೂ ತಿಳಿದಿಲ್ಲ. ಕಲೆ ಮತ್ತು ಸಾಹಿತ್ಯದ ಪ್ರಶಸ್ತಿಗಳಲ್ಲಿಯೂ ರಾಜಕೀಯ ಹಸ್ತಕ್ಷೇಪ ಮಾಡುವುದು ಅತ್ಯಂತ ಅಪಾಯಕಾರಿ’ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿಯ ಧೋರಣೆ ಖಂಡಿಸಿದ ಸ್ಟಾಲಿನ್, ‘ತಮಿಳುನಾಡು ಸರ್ಕಾರವೇ ಇನ್ನು ಮುಂದೆ ಪ್ರತಿವರ್ಷ ‘ಸೆಮ್ಮೊಳಿ ಸಾಹಿತ್ಯ ಪ್ರಶಸ್ತಿ’ (ಶಾಸ್ತ್ರೀಯ ಭಾಷಾ ಸಾಹಿತ್ಯ ಪ್ರಶಸ್ತಿ) ನೀಡಲಿದೆ. ಕನ್ನಡ, ತಮಿಳು, ತೆಲುಗು, ಮಲಯಾಳ, ಒಡಿಯಾ, ಮರಾಠಿ ಮತ್ತು ಬಂಗಾಳಿ ಭಾಷೆಯ ಅತ್ಯುತ್ತಮ ಕೃತಿಗಳಿಗೆ ಈ ಗೌರವ ಸಂದಾಯವಾಗಲಿದೆ’ ಎಂದರು.
ಪ್ರಶಸ್ತಿಯ ಗುಣಮಟ್ಟ ಮತ್ತು ಆಯ್ಕೆ ಪ್ರಕ್ರಿಯೆಯ ಪಾರದರ್ಶಕತೆಗಾಗಿ ಆಯ್ಕೆ ಸಮಿತಿಯನ್ನು ರಚಿಸಲಾಗುವುದು. ಪ್ರಶಸ್ತಿ ವಿಚಾರದಲ್ಲಿ ಯಾವುದೇ ಕಾರಣಕ್ಕೂ ತಮಿಳುನಾಡು ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳುವ ಮೂಲಕ ಕೇಂದ್ರಕ್ಕೆ ತಿರುಗೇಟು ನೀಡಿದರು.
‘ಮುಂದಿನ ಚುನಾವಣೆಯಲ್ಲೂ ದ್ರಾವಿಡ ಮಾದರಿಯ ಆಡಳಿತವೇ ಬರಲಿದೆ. ಆಗ ನಾವು ಇದಕ್ಕಿಂತಲೂ ದೊಡ್ಡಮಟ್ಟದ ಅಂತರಾಷ್ಟ್ರೀಯ ಪುಸ್ತಕ ಮೇಳವನ್ನು ವಿಶ್ವದ ಗಮನ ಸೆಳೆಯುವಂತೆ ಆಯೋಜಿಸುತ್ತೇವೆ. ತಮಿಳುನಾಡಿನಾದ್ಯಂತ ಇನ್ನೂ ಅನೇಕ ಬೃಹತ್ ಗ್ರಂಥಾಲಯಗಳನ್ನು ಜ್ಞಾನ ದೇಗುಲಗಳನ್ನಾಗಿ ನಿರ್ಮಿಸುತ್ತೇವೆ‘ ಎಂದು ಅವರು ತಿಳಿಸಿದರು.
ಪುಸ್ತಕಮೇಳದ ಕೊನೆಯ ದಿನ ತಮಿಳುನಾಡು ಶಾಲಾ ಶಿಕ್ಷಣ ಸಚಿವ ಡಾ.ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರು ವಿವಿಧ ದೇಶಗಳ ಪ್ರಕಾಶಕರ ಬಳಿಗೆ ತೆರಳಿ ಮೇಳದ ಬಗ್ಗೆ ಪ್ರತಿಕ್ರಿಯೆ ಪಡೆದರು. ಬಳಿಕ ಪ್ರಕಾಶಕರೊಂದಿಗೆ ಸಂವಾದ ನಡೆಸಿದರು.
ಸಮಾರೋಪದಲ್ಲಿ ಮಾತನಾಡಿದ ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ‘ನಿಜವಾದ ಸಾಹಿತ್ಯವು ಅಧಿಕಾರಕ್ಕೆ ಮಣಿಯುವುದಿಲ್ಲ ಬದಲಾಗಿ ಅದನ್ನು ಪ್ರಶ್ನಿಸುತ್ತದೆ. ಅನ್ಯಾಯವನ್ನು ಹೋಗಲಾಡಿಸಿ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಲೇಖಕರು ಕೇವಲ ಬರಹಗಾರರಲ್ಲ ಸಮಾಜದ ನೈತಿಕತೆಯ ಸಾಕ್ಷಿದಾರರು’ ಎಂದರು.
‘ಬುಕರ್ ಪ್ರಶಸ್ತಿಯ ಅಂತಿಮಪಟ್ಟಿಯಲ್ಲಿ ತಮಿಳು ಲೇಖಕ ಪೆರುಮಾಳ್ ಮುರುಗನ್ ಅವರ ಕೃತಿಯೂ ಇತ್ತು. ಕನ್ನಡಕ್ಕೆ ಬುಕರ್ ದೊರೆತಿರುವುದು ವೈಯಕ್ತಿಕ ಸಾಧನೆಯಲ್ಲ. ಬದಲಾಗಿ ಅದು ದ್ರಾವಿಡ ಸಾಹಿತ್ಯ ಶಕ್ತಿಗೆ ದೊರೆತ ಜಾಗತಿಕ ಮನ್ನಣೆಯಾಗಿದೆ’ ಎಂದು ವಿಶ್ಲೇಷಿಸಿದರು.
‘ದ ಇನ್‌ವಿಸಿಬಲ್ ಹ್ಯಾಂಡ್’ ಗೋಷ್ಠಿಯಲ್ಲಿ ಮಾತನಾಡಿದ ಬುಕರ್ ಪ್ರಶಸ್ತಿ ಪುರಸ್ಕೃತ ಅನುವಾದಕಿ ದೀಪಾ ಭಾಸ್ತಿ ‘ಮೂಲ ಸಾಹಿತ್ಯದಿಂದ ಅನುವಾದ ಮಾಡಿದ ಪ್ರತಿ ಪದವೂ ಅನುವಾದಕರದ್ದೇ ಆಗಿರುತ್ತದೆ. ಹಾಗಾಗಿ ಅನುವಾದಕರು ನೇಪಥ್ಯದಲ್ಲಿರಬೇಕಿಲ್ಲ’ ಎಂದರು. ಅನುವಾದಕರಾದ ಕವಿತಾ ಮುರಳೀಧರನ್ ಶುಭಶ್ರೀ ದೇಸಿಕನ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಖ್ಯಾತ ಲಿಟರರಿ ಏಜೆಂಟ್ ಕನಿಷ್ಕ ಗುಪ್ತಾ ಗೋಷ್ಠಿಯನ್ನು ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.