ಛಗನ್ ಭುಜಬಲ್
ಪಿಟಿಐ ಚಿತ್ರ
ಮುಂಬೈ: ಛಗನ್ ಭುಜಬಲ್ ಅವರನ್ನು ಮಹಾರಾಷ್ಟ್ರ ಸಚಿವ ಸಂಪುಟದಿಂದ ಹೊರಗಿಟ್ಟಿರುವುದು ಎನ್‌ಸಿಪಿಯ ಆಂತರಿಕ ವಿಚಾರ ಎಂದು ಮಹಾರಾಷ್ಟ್ರ ಸಚಿವ ಹಾಗೂ ಶಿವಸೇನಾ ನಾಯಕ ಭರತ್ ಗೊಗವಾಲೆ ಭಾನುವಾರ ಹೇಳಿದ್ದಾರೆ.
ಬಿಜೆಪಿ ಹಾಗೂ ಶಿವಸೇನಾ ಪಕ್ಷಗಳಂತೆಯೇ, ಸಚಿವರನ್ನು ಆಯ್ಕೆ ಮಾಡುವುದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ವಿವೇಚನೆಗೆ ಬಿಟ್ಟದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಮಾತನಾಡಿರುವ ಭರತ್, 'ಈ ವಿಚಾರದ ಬಗ್ಗೆ ಬೇರೆಯವರು ಹೇಳಿಕೆ ನೀಡಲಾಗದು. ಭುಜಬಲ್ ಅವರನ್ನು ಸಚಿವ ಸಂಪುಟದಿಂದ ಹೊರಗಿಟ್ಟಿರುವುದು ಎನ್‌ಸಿಪಿಯ ಆಂತರಿಕ ವಿಚಾರ. ಅದು ಆಡಳಿತಾರೂಢ ಮಹಾಯುತಿ ಮೈತ್ರಿಯ ಸಮಸ್ಯೆಯಲ್ಲ' ಎಂದಿದ್ದಾರೆ.
ತಮಗೆ ಸಚಿವ ಸ್ಥಾನ ನೀಡದಿರುವುದಕ್ಕೆ ಭುಜಬಲ್ ಅವರು ಪಕ್ಷದ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿರುದ್ಧ ಕಿಡಿಕಾರಿದ್ದರು. ಹಾಗೆಯೇ, ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೆ ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಒಲವಿದೆ ಎಂದು ಹೇಳಿದ್ದಾರೆ.
ಡಿಸೆಂಬರ್ 15ರಂದು ಒಟ್ಟು 39 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಪೈಕಿ 33 ಮಂದಿ ಕ್ಯಾಬಿನೆಟ್ ದರ್ಜೆ ಸಚಿವರು.
ಭುಜಬಲ್ ಅವರು ಏಕನಾಥ ಶಿಂದೆ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದರು. ಈ ವರ್ಷ ನಡೆದ ವಿಧಾನಸಭೆ ಚುನಾವಣೆಗೂ ಮುನ್ನ ಅವರು ಎನ್‌ಸಿಪಿ ತೊರೆಯಲಿದ್ದಾರೆ ಎಂಬ ವದಂತಿ ಹರಿದಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.