ADVERTISEMENT

ಚಂಗೂರ್‌ ಬಾಬಾ ಪ್ರಕರಣ: 3ನೇ ದಿನಕ್ಕೆ ಕಾಲಿಟ್ಟ ಸರ್ಕಾರಿ ಜಮೀನು ಒತ್ತುವರಿ ತೆರವು

ಪಿಟಿಐ
Published 10 ಜುಲೈ 2025, 10:48 IST
Last Updated 10 ಜುಲೈ 2025, 10:48 IST
<div class="paragraphs"><p>ಒತ್ತುವರಿ ತೆರವು ಕಾರ್ಯ</p></div>

ಒತ್ತುವರಿ ತೆರವು ಕಾರ್ಯ

   

ಬಾಲರಾಂಪುರ/ಯುಪಿ: ಅಕ್ರಮ ಮತಾಂತರ ದಂಧೆಯ ಸೂತ್ರಧಾರ ಜಲಾಲುದ್ದೀನ್‌ ಅಲಿಯಾಸ್‌ ಚಂಗೂರ್‌ ಬಾಬಾ, ಇಲ್ಲಿನ ಮಧ್ಯಾ‍ಪುರ ಗ್ರಾಮದಲ್ಲಿ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಜಮೀನನ್ನು ತೆರವು ಕಾರ್ಯಾಚರಣೆ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಚಂಗೂರ್‌ ಬಾಬಾ ಅವರು ಶೇಕಡ 80ರಷ್ಟು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಕಟ್ಟಡಗಳನ್ನು 8 ಬುಲ್ಡೋಜರ್‌ ಬಳಸಿ ಧ್ವಂಸಗೊಳಿಸ‌ಲಾಗಿದ್ದು, ಒತ್ತುವರಿ ತೆರವು ಮಾಡಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ವಿಶಾಲ್‌ ಪಾಂಡೆ ತಿಳಿಸಿದ್ದಾರೆ.

ADVERTISEMENT

‘ಜಲಾಲುದ್ದೀನ್‌ ಕೃತ್ಯಗಳು ಸಮಾಜ ವಿರೋಧಿ ಮಾತ್ರವಲ್ಲ, ಅವು ದೇಶ ವಿರೋಧಿಯೂ ಆಗಿವೆ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ಜಲಾಲುದ್ದೀನ್‌ ಅಲಿಯಾಸ್‌ ಚಂಗೂರ್‌ ಬಾಬಾನನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಜುಲೈ 5ರಂದು ಬಂಧಿಸಿತ್ತು.

ಚಂಗೂರ್‌ ಬಾಬಾ ವಿರುದ್ಧ ಇ.ಡಿ ಪ್ರಕರಣ

ಸಮಾಜದಲ್ಲಿನ ದುರ್ಬಲ ಮತ್ತು ಬಡ ಜನರಿಗೆ ಹಣದ ಆಮಿಷವೊಡ್ಡಿ, ಮತಾಂತರ ದಂಧೆಯ ಸೂತ್ರಧಾರ ಜಮಾಲುದ್ದೀನ್‌ ಅಲಿಯಾಸ್‌ ಚಂಗೂರ್‌ ಬಾಬಾ ನೇತೃತ್ವದ ತಂಡದ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಬುಧವಾರ ಪ್ರಕರಣ ದಾಖಲಿಸಿಕೊಂಡಿದೆ.

ಮತಾಂತರ ಕಾರ್ಯಕ್ಕಾಗಿ ಈ ದಂಧೆಯಲ್ಲಿ ತೊಡಗಿರುವವರಿಗೆ ವಿದೇಶಗಳಿಂದ ₹100 ಕೋಟಿಗೂ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆ ಆಗಿದೆ. ಚಂಗೂರ್‌ ಬಾಬಾನ ಅಕ್ರಮ ಚಟುವಟಿಕೆಗಳು ಮತ್ತು ವಿದೇಶದಿಂದ ವರ್ಗಾವಣೆಯಾಗಿರುವ ಹಣಕಾಸಿನ ಕುರಿತು ಇ.ಡಿ ತನಿಖೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ಮತಾಂತರ ಜಾಲ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಚಂಗೂರ್‌ ಬಾಬಾನನ್ನು ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ಪಡೆ (ಎಟಿಎಸ್‌) ಈಗಾಗಲೇ ಬಂಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.