ನ್ಯಾ. ಬಿ.ಆರ್. ಗವಾಯಿ
ಪಿಟಿಐ ಚಿತ್ರ
ನವದೆಹಲಿ: ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರನ್ನು ಮೇ 14ರಿಂದ ಅನ್ವಯವಾಗುವಂತೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ನೇಮಕ ಮಾಡಿದ್ದಾರೆ.
ಈ ವಿಚಾರವನ್ನು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಎಕ್ಸ್ ಮೂಲಕ ತಿಳಿಸಿದ್ದಾರೆ.
ಗವಾಯಿ ಅವರು ಮೇ 14ರಂದು ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರು ನವೆಂಬರ್ 23ರಂದು ನಿವೃತ್ತರಾಗಲಿದ್ದಾರೆ. ಗವಾಯಿ ಅವರು ಕೆ.ಜಿ. ಬಾಲಕೃಷ್ಣನ್ ಅವರ ನಂತರ ಸಿಜೆಐ ಸ್ಥಾನ ಅಲಂಕರಿಸು ತ್ತಿರುವ ದಲಿತ ಸಮುದಾಯದ ವ್ಯಕ್ತಿಯಾಗಿದ್ದಾರೆ.
ನ್ಯಾಯಮೂರ್ತಿ ಗವಾಯಿ ಅವರು ಆರ್.ಎಸ್. ಗವಾಯಿ ಅವರ ಪುತ್ರ. ಆರ್.ಎಸ್. ಗವಾಯಿ ಅವರು ಬೇರೆ ಬೇರೆ ರಾಜ್ಯಗಳ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸಿದ್ದರು. 1960ರ ನವೆಂಬರ್ 24ರಂದು ಜನಿಸಿದ ಬಿ.ಆರ್. ಗವಾಯಿ, 1985ರ ಮಾರ್ಚ್‌ನಲ್ಲಿ ವಕೀಲ ವೃತ್ತಿ ಆರಂಭಿಸಿದರು. 1987ರಿಂದ 1990ರವರೆಗೆ ಬಾಂಬೆ ಹೈಕೋರ್ಟ್‌ನಲ್ಲಿ ಸ್ವತಂತ್ರವಾಗಿ ವಕೀಲಿಕೆ ನಡೆಸಿದರು. 1990ರ ನಂತರದಲ್ಲಿ ಅವರು ನಾಗ್ಪುರ ಪೀಠದಲ್ಲಿ ವಕೀಲ ವೃತ್ತಿ ನಡೆಸಿದರು.
2003ರ ನವೆಂಬರ್‌ನಲ್ಲಿ ಅವರು ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕ ಆದರು. 2005ರಲ್ಲಿ ಕಾಯಂ ನ್ಯಾಯಮೂರ್ತಿ ಆದರು. 2019ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಯಾಗಿ ಪದೋನ್ನತಿ ಪಡೆದರು.
ಗವಾಯಿ ಅವರಿದ್ದ ಪೀಠದ ಪ್ರಮುಖ ತೀರ್ಪುಗಳು
ಮಹತ್ವದ ತೀರ್ಪುಗಳನ್ನು ಪ್ರಕಟಿಸಿದ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದ ಭಾಗವಾಗಿ ನ್ಯಾಯ ಮೂರ್ತಿ ಗವಾಯಿ ಅವರು ಕರ್ತವ್ಯ ನಿರ್ವಹಿಸಿದ್ದಾರೆ. ಕೆಲವು ಪ್ರಮುಖ ತೀರ್ಪುಗಳು ಇಲ್ಲಿವೆ:
ಸಂವಿಧಾನದ 370ನೆಯ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೇಂದ್ರದ ತೀರ್ಮಾನವನ್ನು ಎತ್ತಿಹಿಡಿದ ಐವರು ನ್ಯಾಯಮೂರ್ತಿಗಳ ಪೀಠದ ಭಾಗವಾಗಿದ್ದರು.
ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಪಡಿಸಿದ ಸಂವಿಧಾನ ಪೀಠದಲ್ಲಿ ನ್ಯಾಯಮೂರ್ತಿ ಗವಾಯಿ ಇದ್ದರು.
ನೋಟು ರದ್ದತಿ ತೀರ್ಮಾನವನ್ನು ಬಹುಮತದ ಮೂಲಕ ಎತ್ತಿಹಿಡಿದ ಸಂವಿಧಾನ ಪೀಠದಲ್ಲಿಯೂ ಅವರು ಇದ್ದರು.
ಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳ ಒಳ ವರ್ಗೀಕರಣದ ಸಾಂವಿಧಾನಿಕ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಬಹುಮತದ ಆಧಾರದಲ್ಲಿ ತೀರ್ಪು ನೀಡಿದ 7 ನ್ಯಾಯಮೂರ್ತಿ ಗಳ ಪೀಠದಲ್ಲಿ ಅವರು ಒಬ್ಬರಾಗಿದ್ದರು.
ಗವಾಯಿ ನೇತೃತ್ವದ ನ್ಯಾಯಪೀಠವು ಇಡೀ ದೇಶಕ್ಕೆ ಅನ್ವಯವಾಗುವ ಮಾರ್ಗಸೂಚಿ
ಯೊಂದನ್ನು ಹೊರಡಿಸಿ, ಕಾರಣ ಕೇಳಿ ನೋಟಿಸ್ ಕೊಡದೆ ಯಾವ ಆಸ್ತಿಯನ್ನೂ ಧ್ವಂಸಗೊಳಿಸು ವಂತೆ ಇಲ್ಲ ಎಂದು ಹೇಳಿತು. ಸಂಬಂಧಪಟ್ಟ ವ್ಯಕ್ತಿಗೆ ನೋಟಿಸ್‌ಗೆ ಪ್ರತಿಕ್ರಿಯೆ ನೀಡಲು 15 ದಿನ ಕಾಲಾವಕಾಶ ಕೊಡಬೇಕು ಎಂದು ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.