
ಡಾ. ಪ್ರವೀಣ್ ಸೋನಿ
ಛಿಂಧ್ವಾರ (ಮಧ್ಯ ಪ್ರದೇಶ): ಕೆಮ್ಮಿನ ಸಿರಪ್ ಸೇವನೆ ಬಳಿಕ ಮೂತ್ರಪಿಂಡ ವೈಫಲ್ಯದಿಂದಾಗಿ 14ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟ ಬೆನ್ನಲ್ಲೇ, ಮಧ್ಯಪ್ರದೇಶ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ.
ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಡಿ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರನ್ನು ಬಂಧಿಸಲಾಗಿದೆ ಹಾಗೂ ಕೆಮ್ಮಿನ ಸಿರಪ್ ‘ಕೋಲ್ಡ್ರಿಫ್’ನ ತಯಾರಿಕಾ ಕಂಪನಿ, ತಮಿಳುನಾಡಿನ ಸ್ರೇಸನ್ ಫಾರ್ಮಾಸ್ಯುಟಿಕಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
‘ಛಿಂದ್ವಾರ ಜಿಲ್ಲೆ ಪರಾಸಿಯಾ ಪೊಲೀಸ್ ಠಾಣೆಯಲ್ಲಿ ಡಾ.ಪ್ರವೀಣ ಸೋನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿದ್ದರೂ ಅವರು ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲದೇ, ಅನುಮತಿಸಿದ ಮಿತಿಗಿಂತ ಅಧಿಕ ಪ್ರಮಾಣದಲ್ಲಿ ಅಪಾಯಕಾರಿ ದ್ರಾವಣ ಇರುವ ಕೆಮ್ಮಿನ ಸಿರಪ್ ಅನ್ನು ಶಿಫಾರಸು ಮಾಡಿದ್ದರು ಎಂಬ ಆರೋಪಗಳಿಗೆ ಸಂಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಪಾಂಡೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ಡಾ.ಪ್ರವೀಣ ವಿರುದ್ಧ ಎಫ್‌ಐಆರ್ ದಾಖಲಾದ ಬಳಿಕ, ಅವರನ್ನು ಛಿಂದ್ವಾರದ ರಾಜಪಾಲ್ ಚೌಕ್‌ನಲ್ಲಿ ಶನಿವಾರ ತಡರಾತ್ರಿ ಬಂಧಿಸಲಾಯಿತು’ ಎಂದೂ ತಿಳಿಸಿದ್ದಾರೆ. ಇದರ ಬೆನ್ನಲ್ಲೇ, ಡಾ.ಪ್ರವೀಣ ಅವರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಡಾ.ಪ್ರವೀಣ ಹಾಗೂ ಸ್ರೇಸನ್ ಫಾರ್ಮಾಸ್ಯುಟಿಕಲ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 278 (ಔಷಧಗಳ ಕಲಬೆರಕೆ), ಸೆಕ್ಷನ್ 105 (ಉದ್ದೇಶಿತವಲ್ಲದ ಹತ್ಯೆ) ಅಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಗಳು ಸಾಬೀತಾದಲ್ಲಿ ಕ್ರಮವಾಗಿ ಒಂದು ವರ್ಷ ಹಾಗೂ ಗರಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಪ್ರಮುಖ ಅಂಶಗಳು
ವೈದ್ಯ ಪ್ರವೀಣ ಸೋನಿ ಹಾಗೂ ಸ್ರೇಸನ್ ಫಾರ್ಮಾಸ್ಯುಟಿಕಲ್ ಕಂಪನಿ ವಿರುದ್ಧ ಡ್ರಗ್ಸ್ ಆ್ಯಂಡ್ ಕಾಸ್ಮೆಟಿಕ್ಸ್ ಕಾಯ್ದೆ–1940ರ ಸೆಕ್ಷನ್ 27ಎ ಅಡಿಯೂ ಪ್ರಕರಣ ದಾಖಲು
ಪರಾಸಿಯಾ ಉಪವಿಭಾಗ ವ್ಯಾಪ್ತಿಯಲ್ಲಿ 11, ಛಿಂದ್ವಾರ ನಗರದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದರೆ, ಚೌರಾಯಿ ತಹಸೀಲ್ ವ್ಯಾಪ್ತಿಯಲ್ಲಿ ಒಂದು ಮಗು ಮೃತಪಟ್ಟಿದೆ
ಮೃತಪಟ್ಟ 14 ಮಕ್ಕಳ ಕುಟುಂಬಗಳಿಗೆ ತಲಾ ₹4 ಲಕ್ಷ ನೆರವು ಘೋಷಿಸಲಾಗಿದೆ
ಕೆಮ್ಮಿನ ಸಿರಪ್ ಸೇವನೆಯಿಂದ ಬಾಧಿತ ಮಕ್ಕಳಿಂದ ಸಂಗ್ರಹಿಸಿರುವ ಮಾದರಿಗಳನ್ನು ಪರೀಕ್ಷೆಗಾಗಿ ಪುಣೆಯ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದೆ
ಕೆಮ್ಮಿನ ಸಿರಪ್ ‘ಕೋಲ್ಡ್ರಿಫ್’ನಿಂದ ಮಕ್ಕಳ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಇದ್ದರೂ ತಿಂಗಳುಗಟ್ಟಲೆ ಈ ಸಿರಪ್ ಅನ್ನು ಡಾ.ಪ್ರವೀಣ ಸೋನಿ ಶಿಫಾರಸು ಮಾಡಿದ್ದರು.ಅಜಯ್ ಪಾಂಡೆ, ಛಿಂದ್ವಾರ ಎಸ್‌ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.