ADVERTISEMENT

ಬೀದಿ ನಾಯಿಗಳ ದಾಳಿ: 4 ವರ್ಷದ ಬಾಲಕ ಸಾವು

ಹೈದರಾಬಾದ್‌ನಲ್ಲಿ ನಡೆದ ಘಟನೆ: ಸಾರ್ವಜನಿಕರಿಂದ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 21:46 IST
Last Updated 21 ಫೆಬ್ರುವರಿ 2023, 21:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್‌: ಕೈಯಲ್ಲಿ ತಿಂಡಿ ಪೊಟ್ಟಣ ಹಿಡಿದು ರಸ್ತೆಯಲ್ಲಿ ಹೋಗುತ್ತಿದ್ದ ನಾಲ್ಕು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದರಿಂದ ಬಾಲಕ ಮೃತಪಟ್ಟಿದ್ದಾನೆ. ಬೀದಿ ನಾಯಿಗಳು ಬಾಲಕನ ಮೇಲೆ ದಾಳಿ ನಡೆಸಿದ ವಿಡಿಯೊ ಹಂಚಿಕೊಂಡಿರುವ ಸಾರ್ವಜನಿಕರು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಇಲ್ಲಿನ ಅಂಬರ್‌ಪೇಟ್‌ ಪ್ರದೇಶ ದಲ್ಲಿ ಭಾನುವಾರ ಈ ಘಟನೆ ನಡೆಸಿದೆ. ದಾಳಿಯ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಲಕನ ತಂದೆ ಇದೇ ಪ್ರದೇಶದಲ್ಲಿ ಇರುವ ಆಟೊಮೊಬೈಲ್‌ ಶೋರೂಂವೊಂದರ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ತಂದೆಯೊಂದಿಗೆ ಬಾಲಕನೂ ಶೋರೂಂಗೆ ಬಂದಿದ್ದ’ ಎಂದು ಗ್ರೇಟರ್‌ ಹೈದರಾಬಾದ್‌ ಮುನ್ಸಿ ಪಲ್‌ ಕಾರ್ಪೊರೇಷನ್‌ (ಜಿಎಚ್‌ಎಂಸಿ) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ದಾಳಿಯಿಂದಾಗಿ ಬಾಲಕ ತೀವ್ರ ಗಾಯಗೊಂಡಿದ್ದ. ಆತನ ತಂದೆ ಹಾಗೂ ಸುತ್ತಮುತ್ತಲಿನವರು ಬಾಲಕನನ್ನು ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ದರು. ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲೇ ಬಾಲಕ ಮೃತಪಟ್ಟಿದ್ದ’ ಎಂದರು. ‘ಈ ಪ್ರದೇಶದಲ್ಲಿ ಕಳೆದ ಎರಡು ದಿನಗಳ ಹಿಂದೆ ಬೀದಿ ನಾಯಿಗಳನ್ನು ಹಿಡಿದು, ಲಸಿಕೆ ನೀಡಿ ಬಿಡಲಾಗಿತ್ತು. 28 ಬೀದಿ ನಾಯಿಗಳಿಗೆ ಲಸಿಕೆ ನೀಡಲಾಗಿದೆ. ಆದರೆ, ಇನ್ನೂ ಹೆಚ್ಚಿನ ಸಂಖ್ಯೆಯ ನಾಯಿಗಳಿಗೆ ಲಸಿಕೆ ನೀಡಬೇಕಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಬೀದಿ ನಾಯಿಗಳ ಹಾವಳಿಯನ್ನು ತಡೆಯಲು, ಪ್ರಾಣಿ ಆರೋಗ್ಯ ಸಂರಕ್ಷಣಾ ಕೇಂದ್ರ ಹಾಗೂ ಪ್ರಾಣಿಗಳ ಸಂತಾನಶಕ್ತಿ ಹರಣ ಕೇಂದ್ರಗಳನ್ನು ತೆರೆಯಲಾಗಿದೆ’ ಎಂದು ತೆಲಂಗಾಣದ ಪೌರಾಡಳಿತ ಸಚಿವ ಕೆ.ಟಿ. ರಾಮ್‌ರಾವ್‌ ಅವರು ಹೇಳಿದ್ದಾರೆ. ‘ಈ ಘಟನೆಯಿಂದ ತೀವ್ರ ನೋವಾಗಿದೆ. ಇಂಥ ಘಟನೆಗಳು ಮತ್ತೆ ನಡೆಯದಂತೆ ಕ್ರಮ ಕೈಗೊಳ್ಳಲಾಗು
ವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.