ADVERTISEMENT

ಉತ್ತರಾಖಂಡ: ಲಿಪುಲೇಖ್ ಪಾಸ್‌ನಾದ್ಯಂತ ಸೇನಾ ನಿಯೋಜನೆ ಹೆಚ್ಚಿಸುತ್ತಿದೆ ಚೀನಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಆಗಸ್ಟ್ 2020, 11:05 IST
Last Updated 1 ಆಗಸ್ಟ್ 2020, 11:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಉತ್ತರಾಖಂಡದ ಲಿಪುಲೇಖ್‌ ಪಾಸ್‌ನಾದ್ಯಂತ ನೈಜ ನಿಯಂತ್ರಣ ರೇಖೆ (ಎಲ್‌ಎಸಿಇ) ಬಳಿ ಚೀನಾವು ಸೇನಾ ನಿಯೋಜನೆ ಹೆಚ್ಚಿಸಿದೆ. ಕಳೆದ ಕೆಲವು ವಾರಗಳಿಂದ ಈ ಪ್ರದೇಶದಲ್ಲಿ ‘ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ)’ ಯೋಧರ ಚಲನವಲನ ಹೆಚ್ಚಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ಸುದ್ದಿತಾಣ ವರದಿ ಮಾಡಿದೆ.

ಪೂರ್ವ ಲಡಾಖ್‌ನಲ್ಲಿ ಭಾರತ–ಚೀನಾ ಯೋಧರ ನಡುವೆ ಮೇ ಆರಂಭದಲ್ಲಿ ಮುಖಾಮುಖಿಯಾಗಿತ್ತು. ಜೂನ್‌ 15ರಂದು ಗಾಲ್ವನ್ ಕಣಿವೆಯಲ್ಲಿ ಸಂಘರ್ಷ ನಡೆದು ಭಾರತೀಯ ಸೇನೆಯ ಕರ್ನಲ್ ಶ್ರೇಣಿಯ ಅಧಿಕಾರಿ ಸೇರಿದಂತೆ 20 ಯೋಧರು ಹುತಾತ್ಮರಾಗಿದ್ದರು. ಬಳಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ನಡೆದ ಮಾತುಕತೆಯಲ್ಲಿ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಒಮ್ಮತಕ್ಕೆ ಬರಲಾಗಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಲಿಪುಲೇಖ್ ಪಾಸ್‌ನಲ್ಲಿ ಚೀನಾ ಸೇನಾ ಚಟುವಟಿಕೆ ಹೆಚ್ಚಿಸುತ್ತಿರುವುದು ಬೆಳಕಿಗೆ ಬಂದಿದೆ.

ಲಿಪುಲೇಖ್ ಪಾಸ್, ಉತ್ತರ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ನೈಜ ನಿಯಂತ್ರಣ ರೇಖೆ ಬಳಿ ಪಿಎಲ್‌ಎ ಯೋಧರನ್ನು ನಿಯೋಜಿಸುತ್ತಿದೆ ಎಂದು ಸೇನೆಯ ಉನ್ನತ ಕಮಾಂಡರ್ ಒಬ್ಬರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ. ಲಿಪುಲೇಖ್ ಪಾಸ್‌ನಲ್ಲಿ ಗಡಿಯಾಚೆ ಸುಮಾರು 1000 ಯೋಧರನ್ನು ಚೀನಾ ನಿಯೋಜಿಸಿದೆ ಎನ್ನಲಾಗಿದೆ.

ADVERTISEMENT

‘ಇದು ಚೀನಾವು ಸನ್ನದ್ಧವಾಗಿದೆ ಎಂಬುದರ ಸೂಚಕವಾಗಿದೆ’ ಎಂದು ಮತ್ತೊಬ್ಬರು ಸೇನಾಧಿಕಾರಿ ತಿಳಿಸಿದ್ದಾರೆ. ನೇಪಾಳದ ಜತೆಗಿನ ಇತ್ತೀಚಿನ ಗಡಿ ವಿವಾದದಿಂದಾಗಿ ಭಾರತವೂ ಆ ಪ್ರದೇಶದಲ್ಲಿ ಯೋಧರ ಸಂಖ್ಯೆ ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ.

ಮಾನಸ ಸರೋವರ ಯಾತ್ರೆಯ ಹಾದಿಯಲ್ಲಿ ಬರುವ ಲಿಪುಲೇಖ್ ಪಾಸ್ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದೆ. ಈ ಪ್ರದೇಶದಲ್ಲಿ ಭಾರತ ನಿರ್ಮಿಸುತ್ತಿರುವ 80 ಕಿ.ಮೀ. ರಸ್ತೆಗೆ ನೇಪಾಳವು ಇತ್ತೀಚೆಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಆ ಪ್ರದೇಶ ತನಗೆ ಸೇರಿದ್ದೆಂದು ವಾದಿಸಿದ್ದ ನೇಪಾಳ ಸರ್ಕಾರ ಲಿಪುಲೇಖ್ ಕಾಲಾಪಾನಿ ಮತ್ತು ಲಿಂಪಿಯಾಧುರಾವನ್ನು ಒಳಗೊಂಡ ಹೊಸ ನಕಾಶೆಗೆ ಸಂತ್‌ನಲ್ಲಿ ಅನುಮೋದನೆ ಪಡೆದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.