ADVERTISEMENT

ಶ್ರೀನಗರ | ಜಿ20 ಸಭೆಗೆ ಚೀನಾ, ಟರ್ಕಿ ಬಹಿಷ್ಕಾರ?

​ಪ್ರಜಾವಾಣಿ ವಾರ್ತೆ
Published 18 ಮೇ 2023, 22:30 IST
Last Updated 18 ಮೇ 2023, 22:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶ್ರೀನಗರ: ಮೇ 22ರಿಂದ 25ರ ವರೆಗೆ ನಡೆಯಲಿರುವ ಜಿ20 ಪ್ರವಾಸಿ ಕಾರ್ಯಕಾರಿ ಗುಂಪಿನ ಸಭೆಯಿಂದ ಚೀನಾ ಮತ್ತು ಟರ್ಕಿ ದೂರ ಉಳಿಯುವ ಸಾಧ್ಯತೆ ದಟ್ಟವಾಗಿದೆ.

ಮಾರ್ಚ್‌ನಲ್ಲಿ ಅರುಣಾಚಲ ಪ್ರದೇಶದಲ್ಲಿ ನಡೆದ ಜಿ20 ಸಭೆಯಿಂದಲೂ ಚೀನಾ ಹಿಂದೆ ಸರಿದಿತ್ತು. ಈ ಎರಡು ದೇಶಗಳ ಜೊತೆಗೆ ಒಕ್ಕೂಟದಲ್ಲಿರುವ ಕೆಲವು ರಾಷ್ಟ್ರಗಳು, ಅತಿಥಿ ರಾಷ್ಟ್ರಗಳೂ ಶ್ರೀನಗರದಲ್ಲಿ ನಡೆಯುವ ಸಭೆಯಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎಂದು ‘ಪ್ರಜಾವಾಣಿ’ಗೆ ಮೂಲಗಳು ತಿಳಿಸಿವೆ.

ಸೌದಿ ಅರೇಬಿಯಾ ಮತ್ತು ಮೆಕ್ಸಿಕೊದಿಂದ ಅಧಿಕೃತ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಆದರೆ, ನವದೆಹಲಿಯಲ್ಲಿರುವ ಈ ದೇಶದ ರಾಜತಾಂತ್ರಿಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿವೆ.

ADVERTISEMENT

‘ಜಮ್ಮು ಮತ್ತು ಕಾಶ್ಮೀರ ವಿಷಯದಲ್ಲಿ ಭಾರತವು ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂಬುದು ಜಿ20 ಒಕ್ಕೂಟದಲ್ಲಿರುವ ಪ್ರಬಲ ರಾಷ್ಟ್ರಗಳ ಒತ್ತಾಯ. ಈ ನಿಲುವಿಗೆ ಅಂಟಿಕೊಂಡಿರುವ ರಾಷ್ಟ್ರಗಳು ಸಭೆಯಿಂದ ಹಿಂದೆ ಸರಿಯುವುದು ನಿಶ್ಚಿತ’ ಎಂದು ವಿಶ್ವಸಂಸ್ಥೆಯ ಅಲ್ಪಸಂಖ್ಯಾತರ ವಿಭಾಗದ ವರದಿಗಾರ ಫರ್ನಾಂಡ್ ಡಿ ವಾರೆನ್ನೆಸ್ ದೂರಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿಯನ್ನು 2019ರಲ್ಲಿ ಕೇಂದ್ರ ಸರ್ಕಾರ ರದ್ದುಪಡಿಸಿತು. ಆ ಬಳಿಕ ಇಲ್ಲಿ ನಡೆಯುತ್ತಿರುವ ಮೊದಲ ಅಂತರರಾಷ್ಟ್ರೀಯ ಕಾರ್ಯಕ್ರಮ ಇದಾಗಿದೆ. ಪಾಕಿಸ್ತಾನ ಮತ್ತು ಚೀನಾ ವಿರೋಧದ ನಡುವೆಯೂ ಜಿ20ಗೆ ಸೇರಿದ ಹಲವು ರಾಷ್ಟ್ರಗಳು ಸಭೆಯಲ್ಲಿ ಭಾಗವಹಿಸುವುದಾಗಿ ಈಗಾಗಲೇ ಘೋಷಿಸಿವೆ. 

ಶ್ರೀನಗರದಲ್ಲಿ ಸಭೆ ಆಯೋಜಿಸಿರುವುದಕ್ಕೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿದೆ. ಜೊತೆಗೆ, ಇದೊಂದು ಭಾರತದ ಬೇಜವಾಬ್ದಾರಿಯುತ ನಡೆ ಎಂದು ಟೀಕಿಸಿದೆ.

ಪಾಕ್‌ನ ಟೀಕೆಗೆ ತಿರುಗೇಟು ನೀಡಿರುವ ಕೇಂದ್ರ ಸರ್ಕಾರವು, ‘ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಶ್ರೀನಗರದಲ್ಲಿ ಸಭೆ ನಡೆಸುವುದು ನಮ್ಮ ಹಕ್ಕು’ ಎಂದು ಪ್ರತಿಪಾದಿಸಿದೆ.

ಭಾರತ ಸೇರಿದಂತೆ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್‌, ಕೆನಡಾ, ಚೀನಾ, ಫ್ರಾನ್ಸ್‌, ಜರ್ಮನಿ, ಇಂಡೊನೇಷ್ಯಾ, ಇಟಲಿ, ಜಪಾನ್‌, ರಿಪಬ್ಲಿಕ್‌ ಆಫ್‌ ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಇಂಗ್ಲೆಂಡ್‌, ಅಮೆರಿಕ ಮತ್ತು ಐರೋಪ್ಯ ಒಕ್ಕೂಟವು ಜಿ20 ಒಕ್ಕೂಟಕ್ಕೆ ಸೇರಿವೆ.

ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರವು, ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಮೇಲೆ ಬೆಳಕು ಚೆಲ್ಲುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.