ADVERTISEMENT

ಎಲ್‌ಜೆಪಿ ಅಧ್ಯಕ್ಷ ಸ್ಥಾನದಿಂದ ಚಿರಾಗ್‌ ಹೊರಗೆ; ಲೋಕಸಭೆ ನಾಯಕತ್ವವೂ ಇಲ್ಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜೂನ್ 2021, 12:05 IST
Last Updated 15 ಜೂನ್ 2021, 12:05 IST
ಎಲ್‌ಜೆಪಿಯ ಚಿರಾಗ್‌ ಪಾಸ್ವಾನ್‌ 
ಎಲ್‌ಜೆಪಿಯ ಚಿರಾಗ್‌ ಪಾಸ್ವಾನ್‌    

ನವದೆಹಲಿ: ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಮುಖ್ಯಸ್ಥನ ಸ್ಥಾನದಿಂದ ಚಿರಾಗ್ ಪಾಸ್ವಾನ್ ಅವರನ್ನು ಕೆಳಗಿಳಿಸಲಾಗಿದೆ. ಲೋಕಸಭೆಯಲ್ಲಿ ಪಕ್ಷದ ನಾಯಕ ಸ್ಥಾನ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಚಿರಾಗ್‌ ಕಳೆದುಕೊಂಡಿರುವುದಾಗಿ ವರದಿಯಾಗಿದೆ.

ಈ ಬೆಳವಣಿಗೆಯಿಂದಾಗಿ ಬಿಹಾರ ರಾಜಕೀಯದಲ್ಲಿ ಹೊಸ ತಿರುವು ಕಂಡು ಬಂದಿದೆ. ಎಲ್‌ಜೆಪಿಯ ಮುಖಂಡ ಸೂರಜ್‌ಭಾನ್‌ ಸಿಂಗ್‌ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಪಕ್ಷದ ರಾಷ್ಟ್ರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹೊಸ ನಾಯಕನ ಆಯ್ಕೆಗೆ ಚುನಾವಣೆ ನಡೆಸುವ ಹೊಣೆಯನ್ನೂ ಸಹ ಅವರಿಗೆ ನೀಡಲಾಗಿದೆ.

ಲೋಕಸಭೆಯಲ್ಲಿ ಎಲ್‌ಜೆಪಿಯ ಮುಖಂಡರಾಗಿ ಪಶುಪತಿ ಕುಮಾರ್‌ ಪರಾಸ್‌ ಅವರನ್ನು ಲೋಕಸಭೆ ಕಾರ್ಯಾಲಯ ಹೆಸರಿಸಿದೆ. ಪಕ್ಷದ ಸಂಸ್ಥಾಪಕ ಮತ್ತು ಚಿರಾಗ್‌ ಅವರ ತಂದೆ ದಿವಂಗತ ರಾಮ್‌ ವಿಲಾಸ್ ಪಾಸ್ವಾನ್‌ ಅವರ ತಮ್ಮ ಪಶುಪತಿ ಕುಮಾರ್‌.

ADVERTISEMENT

ಚಿರಾಗ್‌ ಪಕ್ಷದ ಅಧ್ಯಕ್ಷನಾದಾಗ ಅವರ ಚಿಕ್ಕಪ್ಪ ಪಶುಪತಿ ಕುಮಾರ್‌ ಅವರು ಚಿರಾಗ್‌ ಮೇಲೆ ಕುಪಿತರಾಗಿದ್ದರು. ಅವರ ಕೋಪದಿಂದ ತನ್ನ ತಂದೆಗೆ ಆದ ನೋವಿನ ಬಗ್ಗೆ ಮಾರ್ಚ್‌ನಲ್ಲಿ ಚಿರಾಗ್‌ ಪತ್ರ ಬರೆದಿದ್ದರು. ಆ ಪತ್ರಗಳನ್ನು ಚಿರಾಗ್‌ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಚಿರಾಗ್‌ ಅವರನ್ನು ಪಕ್ಷದ ನಾಯಕತ್ವದಿಂದ ಕೆಳಗಿಳಿಸಿದ ಸುದ್ದಿ ಹೊರ ಬರುತ್ತಿದ್ದಂತೆ, ಅವರ ಬೆಂಬಲಿಗರು ಎಲ್‌ಜೆಪಿಯ ಐವರು ಸಂಸದರ ಚಿತ್ರಗಳ ಪೋಸ್ಟರ್‌ಗಳಿಗೆ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟನಾದಲ್ಲಿ ಪಕ್ಷದ ಕಚೇರಿ ಹೊರ ಭಾಗದಲ್ಲಿ ಈ ಘಟನೆ ನಡೆದಿರುವುದಾಗಿ ಎಎನ್‌ಐ ಟ್ವೀಟಿಸಿದೆ.

ಚಿರಾಗ್‌ ಪಾಸ್ವಾನ್‌ ವಿರುದ್ಧ ಲೋಕ ಜನಶಕ್ತಿ ಪಕ್ಷದ ಐವರು ಸಂಸದರು ಸೋಮವಾರ ಸಿಡಿದೆದ್ದು, ಲೋಕಸಭೆಯಲ್ಲಿ ಚಿರಾಗ್‌ ಪಾಸ್ವಾನ್‌ ಬದಲು ಪಶುಪತಿ ಕುಮಾರ್‌ ಪರಾಸ್‌ ಅವರನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿದ್ದರು. ಈ ನಿರ್ಧಾರದ ಕುರಿತು ಲೋಕಸಭಾ ಸ್ಪೀಕರ್‌ಗೆ ಐವರು ಸಂಸದರು ಮಾಹಿತಿ ನೀಡಿದ್ದರು.

ಸಂಸದರಾದ ಪ್ರಿನ್ಸ್‌ ರಾಜ್‌, ಚಂದನ್‌ ಸಿಂಗ್‌, ವೀನಾ ದೇವಿ ಮತ್ತು ಅಲಿ ಕೈಸರ್‌ ಅವರು ಚಿರಾಗ್‌ ಕಾರ್ಯವೈಖರಿ ಬಗ್ಗೆ ಹಲವು ದಿನಗಳಿಂದ ಅಸಮಾಧಾನ ಹೊಂದಿದ್ದರು ಎಂದು ವರದಿಯಾಗಿದೆ. 2020ರ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ವಿರುದ್ಧ ಚಿರಾಗ್‌ ಪಾಸ್ವಾನ್‌ ಹೋರಾಟಕ್ಕೆ ಇಳಿದಿದ್ದರು. ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎಲ್‌ಜೆಪಿ ಭಾರಿ ಸೋಲು ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.