ADVERTISEMENT

ಲೋಕಸಭೆಯಲ್ಲಿ ಎಲ್‌ಜೆಪಿ ನಾಯಕರ ಆಯ್ಕೆ: ಸ್ಪೀಕರ್‌ಗೆ ಚಿರಾಗ್ ಪಾಸ್ವಾನ್ ಪತ್ರ

ಪಿಟಿಐ
Published 16 ಜೂನ್ 2021, 10:47 IST
Last Updated 16 ಜೂನ್ 2021, 10:47 IST
ಚಿರಾಗ್ ಪಾಸ್ವಾನ್
ಚಿರಾಗ್ ಪಾಸ್ವಾನ್   

ನವದೆಹಲಿ: ಲೋಕಸಭೆಯಲ್ಲಿ ಲೋಕ ಜನಶಕ್ತಿ ಪಕ್ಷದ(ಎಲ್‌ಜೆಪಿ) ನಾಯಕರನ್ನಾಗಿಪಶುಪತಿ ಕುಮಾರ್ ಪಾರಸ್‌ ಅವರನ್ನು ನೇಮಿಸಿ ಅಧಿಸೂಚನೆ ಹೊರಡಿಸಿರುವುದನ್ನು ಪ್ರಶ್ನಿಸಿ, ಎಲ್‌ಜೆಪಿ ನಾಯಕ ಚಿರಾಗ್‌ ಪಾಸ್‌ವಾನ್ ಲೋಕಸಭಾ ಸ್ಪೀಕರ್‌ಗೆ ಪತ್ರ ಬರೆದಿದ್ದು, ‘ಇದು ನಮ್ಮ ಪಕ್ಷದ ಸಾಂಸ್ಥಿಕ ನಿಯಮಗಳಿಗೆ ವಿರುದ್ಧವಾಗಿದೆ‘ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಂಗಳವಾರ ಲೋಕಸಭಾ ಸ್ಪೀಕರ್‌ಗೆ ಬರೆದಿರುವ ಪತ್ರದಲ್ಲಿ ಚಿರಾಗ್ ಅವರು, ‘ತಮ್ಮ ವಿರುದ್ಧ ಆರೋಪ ಮಾಡಿರುವ ಐವರು ಸಂಸದರನ್ನು ಪಕ್ಷದಿಂದ ಹೊರ ಹಾಕಲು ನಿರ್ಧರಿಸಲಾಗಿದೆ‘ ಎಂದು ತಿಳಿಸಿದ್ದಾರೆ. ಇದೇ ವೇಳೆ, ‘ತಾವು ಈ ಹಿಂದೆ ತೆಗೆದುಕೊಂಡಿರುವ ನಿರ್ಧಾರವನ್ನು ಮರುಪರಿಶೀಲಿಸಿ, ನನ್ನನ್ನು ಲೋಕಸಭೆಯಲ್ಲಿ ಎಲ್‌ಜೆಪಿ ಪಕ್ಷದ ನಾಯಕನನ್ನಾಗಿ ನೇಮಿಸಿ, ಹೊಸ ಸುತ್ತೋಲೆ ಹೊರಡಿಸುವಂತೆ‘ ಒತ್ತಾಯಿಸಿದ್ದಾರೆ.

‘ಸಂವಿಧಾನದ ಪರಿಚ್ಛೇದ 26ರ ಪ್ರಕಾರ ಲೋಕಸಭೆಯಲ್ಲಿ ಯಾರು ಪಕ್ಷದ ನಾಯಕರಾಗಬೇಕೆಂದು ಎಲ್‌ಜೆಪಿಯ ಕೇಂದ್ರ ಸಂಸದೀಯ ಮಂಡಳಿ ನಿರ್ಧರಿಸುತ್ತದೆ. ಹಾಗಾಗಿ ಸಂಸದ ಪಶುಪತಿ ಕುಮಾರ್ ಪಾರಸ್ ಅವರನ್ನು ಲೋಕಸಭೆಯಲ್ಲಿ ಪಕ್ಷದ ನಾಯಕರೆಂದು ಆಯ್ಕೆ ಮಾಡುವುದು ನಮ್ಮ ಪಕ್ಷದ ಸಂಸದೀಯ ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ‘ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಪಶುಪತಿ ಕುಮಾರ್ ಪಾರಸ್ ಅವರು,ಎಲ್‌ಜೆಪಿ ಸಂಸ್ಥಾಪಕ ಮತ್ತು ಚಿರಾಗ್‌ ಅವರ ತಂದೆ ದಿವಂಗತ ರಾಮ್‌ ವಿಲಾಸ್ ಪಾಸ್ವಾನ್‌ ಅವರ ತಮ್ಮ. ಚಿರಾಗ್‌ ಪಾಸ್ವಾನ್‌ ವಿರುದ್ಧ ಸಿಡಿದೆದ್ದ ಎಲ್‌ಜೆಪಿಯ ಐವರು ಸಂಸದರು ಸೋಮವಾರ ಲೋಕಸಭೆಯಲ್ಲಿ ಚಿರಾಗ್‌ ಪಾಸ್ವಾನ್‌ ಬದಲು ಪಶುಪತಿ ಕುಮಾರ್‌ ಪರಾಸ್‌ ಅವರನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.