ADVERTISEMENT

ಜಮ್ಮು & ಕಾಶ್ಮೀರಕ್ಕೆ ನಾಗರಿಕ ವಿಮಾನಯಾನ ಸಚಿವ: ಭದ್ರತಾ ಸ್ಥಿತಿ ಪರಿಶೀಲನೆ

ಪಿಟಿಐ
Published 15 ಮೇ 2025, 9:22 IST
Last Updated 15 ಮೇ 2025, 9:22 IST
<div class="paragraphs"><p>ನಾಗರಿಕ ವಿಮಾನಯಾನ ಸಚಿವ&nbsp;ಕೆ.ರಾಮ್‌ಮೋಹನ್‌ ನಾಯ್ಡು</p></div>

ನಾಗರಿಕ ವಿಮಾನಯಾನ ಸಚಿವ ಕೆ.ರಾಮ್‌ಮೋಹನ್‌ ನಾಯ್ಡು

   

ಪಿಟಿಐ ಚಿತ್ರ

ಶ್ರೀನಗರ: ಪಹಲ್ಗಾಮ್‌ ದಾಳಿ ಬೆನ್ನಲ್ಲೇ ಭಾರತ–ಪಾಕಿಸ್ತಾನ ಸಂಘರ್ಷ ಉಲ್ಬಣಿಸಿದ ಬಳಿಕ ನಾಗರಿಕ ವಿಮಾನಯಾನ ಸಚಿವ ಕೆ.ರಾಮ್‌ಮೋಹನ್‌ ನಾಯ್ಡು ಅವರು ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಗುರುವಾರ ಭೇಟಿ ನೀಡಿದ್ದಾರೆ.

ADVERTISEMENT

ಅವರು, ಶ್ರೀನಗರ ಹಾಗೂ ಜಮ್ಮು ವಿಮಾನ ನಿಲ್ದಾಣಗಳಲ್ಲಿ ಭದ್ರತಾ ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸಿದ್ದಾರೆ.

ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆ ಕಾರ್ಯಾಚರಣೆ ನಿಲ್ಲಿಸಿದ್ದ ಈ ವಿಮಾನ ನಿಲ್ದಾಣಗಳಲ್ಲಿ, ವಾರದ ನಂತರ ವಿಮಾನ ಪ್ರಯಾಣ ಆರಂಭವಾಗಿದೆ.

ಬೆಳಿಗ್ಗೆಯೇ ಶ್ರೀನಗರದ ವಿಮಾನ ನಿಲ್ದಾಣಕ್ಕೆ ಬಂದ ನಾಯ್ಡು, ಭದ್ರತಾ ಸಂಸ್ಥೆಗಳು, ಸಂಬಂಧಿತ ಅಧಿಕಾರಿಗಳೊಂದಿಗೆ ಸಚಿವರ ಕಚೇರಿಯಲ್ಲಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಪ್ರಯಾಣಿಕರಿಗೆ ಕಲ್ಪಿಸಲಾಗಿರುವ ಮೂಲಸೌಕರ್ಯ ವ್ಯವಸ್ಥೆ ಕುರಿತೂ ಪರಿಶೀಲನೆ ನಡೆಸಿದ್ದಾರೆ ಎಂದು ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.

ನಾಯ್ಡು ಅವರು ಶ್ರೀನಗರದ ಲಾಲ್‌ ಚೌಕ್‌ಗೂ ಭೇಟಿ ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮಿರದ ಅನಂತನಾಗ್‌ ಜಿಲ್ಲೆಯ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ ಉಗ್ರರು ಏಪ್ರಿಲ್‌ 22ರಂದು ಗುಂಡಿನ ದಾಳಿ ನಡೆಸಿದ್ದರು. 26 ಜನರು ಹತ್ಯೆಯಾಗಿ, ಹಲವರು ಗಾಯಗೊಂಡಿದ್ದರು. ಅದರ ಬೆನ್ನಲ್ಲೇ, ಕ್ರಮ ಕೈಗೊಂಡ ಕೇಂದ್ರ ಸರ್ಕಾರ, ಭಾರತದಲ್ಲಿ ನೆಲೆಸಿದ್ದ ಪಾಕ್‌ ನಿವಾಸಿಗಳ ವೀಸಾ ರದ್ದುಪಡಿಸಿ, ದೇಶದಿಂದ ಹೊರಹಾಕಿತ್ತು.

ಎರಡು ವಾರದ ನಂತರ ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ 'ಆಪರೇಷನ್‌ ಸಿಂಧೂರ' ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ನೂರಾರು ಉಗ್ರರು ಹತರಾಗಿದ್ದರು. ಅದಕ್ಕೆ ಪ್ರತಿಯಾಗಿ, ಪಾಕ್‌ ಪಡೆಗಳು ಗಡಿಯುದ್ದಕ್ಕೂ ದಾಳಿ ನಡೆಸಿದ್ದರಿಂದ, ಉಭಯ ದೇಶಗಳ ನಡುವೆ ಸಂಘರ್ಷ ಸ್ಥಿತಿ ನಿರ್ಮಾಣವಾಗಿತ್ತು.

ಸಂಘರ್ಷ ತೀವ್ರಗೊಂಡ ಹಿನ್ನೆಲೆಯಲ್ಲಿ ದೇಶದ ಉತ್ತರ ಹಾಗೂ ಪಶ್ಚಿಮ ಭಾಗದ 32 ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತೊಳಿಸಲಾಗಿತ್ತು. ಮೇ 10ರಂದು ಕದನ ವಿರಾಮ ಘೋಷಣೆಯಾದ ಬಳಿಕ, ಗಡಿ ಪ್ರದೇಶ ಸಹಜ ಸ್ಥಿತಿಗೆ ಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.