ADVERTISEMENT

CJI ಬಗ್ಗೆ ಅವಹೇಳನಕಾರಿ ಹೇಳಿಕೆ: ದುಬೆ ವಿರುದ್ಧದ PIL ತಿರಸ್ಕರಿಸಿದ SC

ಪಿಟಿಐ
Published 5 ಮೇ 2025, 9:36 IST
Last Updated 5 ಮೇ 2025, 9:36 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಕೋರ್ಟ್ ಹಾಗೂ ಸಿಜೆಐ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ನ್ಯಾಯಾಂಗ ನಿಂದನೆ ‍ಪ್ರಕರಣ ದಾಖಲಿಸಬೇಕು ಎಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸ್ವೀಕರಿಸುವುದಿಲ್ಲ ಎಂದು ಸು‍‍ಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

‘ಸುಪ್ರೀಂ ಕೋರ್ಟ್ ದೇಶವನ್ನು ಅರಾಜಕತೆಗೆ ತಳ್ಳುತ್ತಿದೆ. ದೇಶದಲ್ಲಿ ನಡೆಯುತ್ತಿರುವ ನಾಗರಿಕ ಯುದ್ಧಗಳಿಗೆ ಸಿಜೆಐ ಸಂಜೀವ್ ಖನ್ನಾ ಅವರೇ ಜವಾಬ್ದಾರರು’ ಎಂದು ದುಬೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.

‘ಸುಪ್ರೀಂ ಕೋರ್ಟ್‌ನ ಘನತೆಯನ್ನು ಕಾಪಾಡಬೇಕಿದೆ. ಹೀಗೆ ಮುಂದುವರಿಯುವುದು ಸಲ್ಲ’ ಎಂದು ಅರ್ಜಿದಾರರಾದ ವಿಶಾಲ್ ತಿವಾರಿಯವರು ಸಿಜೆಐ ಅವರೂ ಇದ್ದ ಪೀಠದ ಮುಂದೆ ಅರುಹಿದರು.

ADVERTISEMENT

ಸುಪ್ರೀಂ ಕೋರ್ಟ್ ವಕೀಲರ ಸಂಘ ಸೇರಿ ಹಲವು ನಾಯಕರು ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ದುಬೆ ಅವರ ಹೇಳಿಕೆಯು ನ್ಯಾಯಾಂಗ ನಿಂದನೆ ಹಾಗೂ ದ್ವೇಷಪೂರಿತ ಎಂದು ಪೀಠದ ಗಮನಕ್ಕೆ ತಂದರು.

‘ನಾವು ಹೃಸ್ವ ಆದೇಶವನ್ನು ಹೊರಡಿಸುತ್ತೇವೆ. ನಾವು ಕೆಲವೊಂದು ಕಾರಣಗಳನ್ನೂ ನೀಡುತ್ತೇವೆ. ನಾವು ಅರ್ಜಿಯನ್ನು ಪುರಸ್ಕರಿಸುವುದಿಲ್ಲ, ಆದರೆ ಸಣ್ಣ ಆದೇಶ ನೀಡುತ್ತೇವೆ’ ಎಂದು ಸಿಜೆಐ ಹೇಳಿದ್ದಾರೆ.

ಜಾರ್ಖಂಡ್‌ನ ಗೊಂಡಾ ಕ್ಷೇತ್ರದ ಸಂಸದರಾದ ನಿಶಿಕಾಂತ್ ದುಬೆಯವರು ಸಿಜೆಐ ಸಂಜೀವ್ ಖನ್ನಾ ಅವರ ವಿರುದ್ಧ ‍ಪ್ರಚೋದನಾಕಾರಿ, ದ್ವೇಷಪೂರಿತ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯು ಸಂಪೂರ್ಣ ನ್ಯಾಯಾಂಗ ಮತ್ತು ಸುಪ್ರೀಂ ಕೋರ್ಟ್ ಬಗ್ಗೆ ಅವಹೇಳನಕಾರಿ ಭಾಷಣಗಳಿಂದ ತುಂಬಿದೆ. ಇದು ಬಿಎನ್‌ಎಸ್‌ ಹಾಗೂ ನ್ಯಾಯಾಂಗ ನಿಂದನೆ ಕಾಯ್ದೆ 15ರ ಅನ್ವಯ ಶಿಕ್ಷಾರ್ಹ ಎಂದು ಪಿಐಎಲ್‌ನಲ್ಲಿ ಉಲ್ಲೇಖಿಸಲಾಗಿದೆ.

ಸುಪ್ರೀಂ ಕೋರ್ಟ್‌ ಹಾಗೂ ನ್ಯಾಯಮೂರ್ತಿಗಳ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದ್ದು, ಸಂಸದರ ವಿರುದ್ಧ ಸಂವಿಧಾನದ 129ನೇ ವಿಧಿಯಡಿ ಇರುವ ಅಧಿಕಾರ ಬಳಸಿ ನ್ಯಾಯಾಂಗ ನಿಂದನೆಗೆ ಒಳಪಡಿಸಬೇಕು ಎಂದು ಕೋರಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.