ADVERTISEMENT

ವಿದ್ಯಾರ್ಥಿನಿಯರೇ ಇದ್ದ ಪರೀಕ್ಷಾ ಕೊಠಡಿಗೆ ಹಾಜರಾದ ಏಕೈಕ ವಿದ್ಯಾರ್ಥಿ ಆಸ್ಪತ್ರೆಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2023, 14:41 IST
Last Updated 2 ಫೆಬ್ರುವರಿ 2023, 14:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಟ್ನಾ: ಸಂಪೂರ್ಣ ವಿದ್ಯಾರ್ಥಿನಿಯರಿದ್ದ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಹೋದ ಏಕೈಕ ವಿದ್ಯಾರ್ಥಿಯೊಬ್ಬ ಪ್ರಜ್ಞೆ ತಪ್ಪಿ ಬಿದ್ದು ಆಸ್ಪತ್ರೆ ಸೇರಿರುವ ಘಟನೆ ಬಿಹಾರದಿಂದ ವರದಿಯಾಗಿದೆ.

ಬಿಹಾರದ ಶಾಲಾ ಪರೀಕ್ಷಾ ಮಂಡಳಿಯ 12 ನೇ ತರಗತಿ ಪರೀಕ್ಷೆಗಳು ಫೆ 1ರಿಂದ ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ನಳಂದ ಜಿಲ್ಲೆಯ ‘ಬಿಹಾರ್ ಶಾರೀಫ್‌’ನ ಅಲ್ಮಾ ಕಾಲೇಜಿನಲ್ಲಿ 12 ನೇ ತರಗತಿ ವಿದ್ಯಾರ್ಥಿ ಮಣಿಶಂಕರ್ ಪಕ್ಕದ ಬ್ರಿಲಿಯಂಟ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ತೆರಳಿದ್ದ.

ಈ ವೇಳೆ ಮಣಿಶಂಕರ್ ಪರೀಕ್ಷೆ ಬರೆಯಲು ತೆರಳಿದ್ದ ಕೊಠಡಿಯಲ್ಲಿ ಪೂರ್ತಿ 50 ವಿದ್ಯಾರ್ಥಿನಿಯರೇ ಇದ್ದರು. ಇದನ್ನು ಕಂಡು ಕೆಲಹೊತ್ತಿನ ನಂತರ ಮಣಿಶಂಕರ್ ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಿದ್ದಾನೆ. ಶಿಕ್ಷಕರಿಂದ ವಿಷಯ ತಿಳಿದ ಮಣಿಶಂಕರ್ ದೊಡ್ಡಮ್ಮ ಆತನನ್ನು ಸಮೀಪದ ಸರ್ಧಾರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಕುರಿತು ಎನ್‌ಡಿಟಿವಿ ವರದಿ ಮಾಡಿದೆ.

ADVERTISEMENT

‘ಕೊಠಡಿ ತುಂಬ ವಿದ್ಯಾರ್ಥಿನಿಯರೇ ಇದ್ದಿದ್ದಕ್ಕೆ ನಮ್ಮ ಹುಡುಗ ನಿತ್ರಾಣನಾಗಿದ್ದ. ಬಳಿಕ ಮೂರ್ಛೆ ತಪ್ಪಿ ಬಿದ್ದಿದ್ದರಿಂದ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಹೋಗಿದ್ದೇವೆ ಎಂದು ಮಣಿಶಂಕರ್ ದೊಡ್ಡಮ್ಮ ಎಎನ್‌ಐ ಸುದ್ದಿಸಂಸ್ಥೆಗೆ ಹೇಳಿಕೆ ನೀಡಿರುವುದು ವರದಿಯಾಗಿದೆ.

‘ಬಿಹಾರ್ ಶಾರೀಫ್‌’ ಪಟ್ಟಣವು ಬಿಹಾರದ ನಳಂದ ಜಿಲ್ಲೆಯ ಕೇಂದ್ರ ಸ್ಥಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.